ತೆಹಟ್ಟಾ (ಪಶ್ಚಿಮ ಬಂಗಾಳ): ಜಮ್ಮು ಮತ್ತು ಕಾಶ್ಮೀರದ ಅಂತಾರಾಷ್ಟ್ರೀಯ ಗಡಿ ನಿಯಂತ್ರಣ ರೇಖೆಯಲ್ಲಿ ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸಿ ಗುಂಡಿನ ದಾಳಿ ನಡೆಸಿದ ಪರಿಣಾಮ ಭಾರತೀಯ ಸೇನೆಯ ಗನ್ನರ್ ಸುಬೋದ್ ಘೋಷ್ ಮೃತಪಟ್ಟಿದ್ದು, ಭಾನುವಾರ ರಾತ್ರಿ ನಾಡಿಯಾ ಜಿಲ್ಲೆಯ ನಿವಾಸಕ್ಕೆ ಮೃತದೇಹವನ್ನು ತರಲಾಯಿತು.
ಜಮ್ಮು ಮತ್ತು ಕಾಶ್ಮೀರದ ಗುರೇಜ್ ಮತ್ತು ಉರಿ ವಲಯಗಳಲ್ಲಿ ಶುಕ್ರವಾರದಂದು ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸಿ ನಡೆಸಿದ ಗುಂಡಿನ ದಾಳಿಗೆ ನಾಲ್ವರು ಸೈನಿಕರು, ಬಿಎಸ್ಎಫ್ ಜವಾನ್ ಮತ್ತು ಆರು ನಾಗರಿಕರು ಬಲಿಯಾಗಿದ್ದಾರೆ. ಈ ವೇಳೆ, ಸುಬೋದ್ ಘೋಷ್ ಅವರನ್ನು ಉರಿ ವಲಯದಲ್ಲಿ ನಿಯೋಜಿಸಲಾಗಿತ್ತು.
ಘೋಷ್ ತಮ್ಮ 23 ನೇ ವಯಸ್ಸಿನಲ್ಲಿ ಅಂದರೆ 2017 ರಲ್ಲಿ ಭಾರತೀಯ ಸೈನ್ಯಕ್ಕೆ ಸೇರಿದ್ದರು. ಕಳೆದ ವರ್ಷ ನವೆಂಬರ್‌ನಲ್ಲಿ ಸಾಂಸಾರಿಕ ಜೀವನಕ್ಕೆ ಕಾಲಿರಿಸಿದ್ದ ಇವರು, ಈ ವರ್ಷ ಆಗಸ್ಟ್ 19 ರಂದು ಹೆಣ್ಣು ಮಗುವಿನ ತಂದೆಯಾಗಿದ್ದರು.
ಪತಿಯ ಅಗಲಿಕೆಗೆ ದುಖಿಃತಳಾದ ಪತ್ನಿ ಅನಂದಿತಾ, ನಮ್ಮ ಮೂರು ತಿಂಗಳ ಮಗಳ ನಾಮಕರಣ ಸಮಾರಂಭಕ್ಕೆ ಮನೆಗೆ ಬರುವುದಾಗಿ ಅವರು ನಮಗೆ ಭರವಸೆ ನೀಡಿದ್ದರು. ಆದರೆ, ಈಗ, ನನ್ನ ಜೀವನದಲ್ಲಿ ಎಲ್ಲವೂ ಮುಗಿದಂತೆ ಭಾಸವಾಗುತ್ತಿದೆ ಎಂದು ಕಣ್ಣೀರಿಟ್ಟಿದ್ದಾರೆ.