ನವದೆಹಲಿ: ಕೊರೊನಾ ಹಿನ್ನೆಲೆಯಲ್ಲಿ ರೈಲ್ವೆ ಸಂಚಾರ ಸ್ಥಗಿತಗೊಂಡಿತ್ತು. ಹೀಗಾಗಿ ರೈಲ್ವೆ ನಿಲ್ದಾಣಗಳಲ್ಲಿ ಕೂಲಿ ಮಾಡುತ್ತಿದ್ದವರು, ಸಣ್ಣ ಮಾರಾಟಗಾರರು ಮತ್ತು ಇತರ ಕಾರ್ಮಿಕರು ಸಂಕಷ್ಟ ಎದುರಿಸುವಂತಾಗಿತ್ತು.
ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಕಾರ್ಮಿಕರ ಸಹಾಯಕ್ಕೆ ಯಾರೂ ಬಂದಿರಲಿಲ್ಲ. ಇನ್ನು ಕುಟುಂಬ ನಿರ್ವಹಿಸಲು ಇವರು ಸಾಕಷ್ಟು ಹರಸಾಹಸಗಳನ್ನು ಪಟ್ಟಿದ್ದಾರೆ. ಇನ್ನು ಈಟಿವಿ ಭಾರತದೊಂದಿಗೆ ಕೆಲ ಸಂತ್ರಸ್ತರು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಅಖಿಲ ಭಾರತೀಯ ರೈಲ್ವೆ ಖಾನ್ - ಪ್ಯಾನ್ ಪರವಾನಗಿಗಳ ಕಲ್ಯಾಣ ಸಂಘದ ಅಧ್ಯಕ್ಷ ರವೀಂದರ್ ಗುಪ್ತಾ ಮಾತನಾಡಿ, “ಸರ್ಕಾರ ಇನ್ನೂ ಯಾವುದೇ ಸಹಾಯವನ್ನು ನೀಡಿಲ್ಲ. ಲಾಕ್‌ಡೌನ್ ಸಮಯದಲ್ಲಿ, ಮಳಿಗೆಗಳನ್ನು ಬಲವಂತವಾಗಿ ಮುಚ್ಚಲು ಸಚಿವಾಲಯವು ಸೂಚನೆ ನೀಡಿತು. ಇದೀಗ ಪರವಾನಗಿ ಶುಲ್ಕವನ್ನು ಸಡಿಲಿಸಬೇಕು ಎಂದು ನಾವು ಒತ್ತಾಯಿಸಿದ್ದೇವೆ ಎಂದರು.
"ರೈಲ್ವೆ ನಿಲ್ದಾಣಗಳಲ್ಲಿನ ಸ್ಟಾಲ್ ಮಾರಾಟಗಾರರಿಗೆ ಪಡಿತರ ಮತ್ತು ಇತರ ಅಗತ್ಯ ವಸ್ತುಗಳನ್ನು ಒದಗಿಸಬೇಕು. ವಿದ್ಯುತ್ ಮತ್ತು ನೀರಿನ ಬಿಲ್‌ಗಳನ್ನು ಸಹ ಸಡಿಲಿಸಬೇಕು ಎಂದು ನಾವು ಸರ್ಕಾರವನ್ನು ಒತ್ತಾಯಿಸಿದ್ದೆವು. ಆದರೆ ಶೇ100ರಷ್ಟು ಪರವಾನಗಿ ಶುಲ್ಕ, ವಿದ್ಯುತ್ ಮತ್ತು ನೀರಿನ ಬಿಲ್ ಅನ್ನು ಮನ್ನಾ ಮಾಡುವ ಬಗ್ಗೆ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿಲ್ಲ" ಅವರು ಈಟಿವಿ ಭಾರತಕ್ಕೆ ತಿಳಿಸಿದರು.
"ಜೂನ್ 1ರಿಂದ ಮಳಿಗೆಗಳನ್ನು ಮತ್ತೆ ತೆರೆಯಲು ಸರ್ಕಾರ ಒತ್ತಡ ಹೇರಿದ್ದರೂ, ಮಾರಾಟಗಾರರು ಅದರ ಭಾರವನ್ನು ಎದುರಿಸುತ್ತಿದ್ದಾರೆ. ಸಂಪೂರ್ಣ ಸ್ಥಗಿತದ ಹಿನ್ನೆಲೆಯಲ್ಲಿ ಯಾವುದೇ ಆದಾಯವಿಲ್ಲದ ಕಾರಣ ಅವರು ಹಸಿವಿನಿಂದ ಸಾಯುತ್ತಿದ್ದಾರೆ. ಮಾರಾಟಗಾರರು ಭಾರಿ ನಷ್ಟವನ್ನು ಅನುಭವಿಸುತ್ತಿದ್ದಾರೆ ಮತ್ತು ಸಾಲಗಳಿಗೆ ಹೊಣೆಗಾರರಾಗಿದ್ದಾರೆ ”ಎಂದು ಗುಪ್ತಾ ಹೇಳಿದರು.
ಕೆಲವೇ ರೈಲುಗಳು ಕಾರ್ಯನಿರ್ವಹಿಸುತ್ತಿರುವುದರಿಂದ ಈ ಸಮಯದಲ್ಲಿ ಆಹಾರ ಮಳಿಗೆಗಳನ್ನು ತೆರೆಯುವುದರಲ್ಲಿ ಯಾವುದೇ ಅರ್ಥವಿಲ್ಲ. ಆದ್ದರಿಂದ, ಪರವಾನಗಿ ಶುಲ್ಕವನ್ನು ಸಡಿಲಗೊಳಿಸಬೇಕು ಎಂದು ಒತ್ತಾಯಿಸುತ್ತೇವೆ ಎಂದರು.
ಅಖಿಲ ಭಾರತ ರೈಲ್ವೆ ಮೆನ್ ಫೆಡರೇಶನ್ ಪ್ರಧಾನ ಕಾರ್ಯದರ್ಶಿ ಗೋಪಾಲ್ ಮಿಶ್ರಾ ಮಾತನಾಡಿ, “ ದಿನಕ್ಕೆ ಎರಡು ಬಾರಿ ಆಹಾರವನ್ನು ಪಡೆಯಲು ಸಹ ಕಷ್ಟವಾಗಿದೆ. ಪ್ರಯಾಣಿಕರ ರೈಲುಗಳು ಕಾರ್ಯನಿರ್ವಹಿಸದ ಕಾರಣ ಕೂಲಿಗಳ ಸ್ಥಿತಿ ಹೆಚ್ಚು ಶೋಚನೀಯವಾಗಿದೆ. ಜನ ಧನ್ ಖಾತೆ ಇರುವವರು ಕೇಂದ್ರದಿಂದ 1000 ರೂ. ಮತ್ತು ರಾಜ್ಯ ಸರ್ಕಾರಗಳಿಂದ 500 ರೂ. ಪಡೆಯುತ್ತಾರೆ. ಅದರ ಹೊರತಾಗಿ, ರೈಲ್ವೆ ಒಕ್ಕೂಟಗಳು ಸಾಧ್ಯವಾದಷ್ಟು ಸಹಾಯವನ್ನು ನೀಡುತ್ತಿವೆ ಆದರೆ ಅದು ಸಾಕಾಗುವುದಿಲ್ಲ” ಎಂದರು.