ಬೆಂಗಳೂರು: ವಿದ್ಯುತ್ ಸರಬರಾಜಿನಲ್ಲಿ ದೋಷ ಕಂಡು ಬಂದ ಹಿನ್ನೆಲೆ ನಗರದ ಕೆಲವು ಭಾಗಗಳಿಗೆ ಇಂದು ನೀರು ಪೂರೈಕೆಯಲ್ಲಿ ವ್ಯತ್ಯಯ ಆಗಲಿದೆ ಎಂದು ಜಲಮಂಡಳಿ ಪ್ರಕಟಣೆ ಹೊರಡಿಸಿದೆ.
ನಿನ್ನೆ ಮಧ್ಯಾಹ್ನ 3-35ರಿಂದ ಸಂಜೆ 5-35ರವರೆಗೆ ಸೋಮನಹಳ್ಳಿ ವಿದ್ಯುತ್ ಸ್ಥಾವರದಿಂದ ತಾತಗುಣಿ ಯಂತ್ರಗಾರಕ್ಕೆ ಸರಬರಾಜು ಆಗುತ್ತಿದ್ದ ಕೆಪಿಟಿಸಿಎಲ್ನ 220 ಕೆವಿ ವಿದ್ಯುತ್ ಪ್ರಸರಣ ಮಾರ್ಗದಲ್ಲಿ ಅನಿರೀಕ್ಷಿತ ದೋಷದಿಂದ ವಿದ್ಯುತ್ ಸರಬರಾಜು ಸುಮಾರು 2 ಗಂಟೆಗಳ ಕಾಲ ಸ್ಥಗಿತಗೊಂಡಿತ್ತು.
ಹೀಗಾಗಿ ನಗರಕ್ಕೆ ಕಾವೇರಿ ನೀರು ಸರಬರಾಜಾಗುತ್ತಿದ್ದ ತಾತಗುಣಿ ಯಂತ್ರಗಾರದ ಕಾವೇರಿ ನೀರು ಸರಬರಾಜು ಯೋಜನೆಯ 1, 2, 3, 4 ಹಾಗೂ ನಾಲ್ಕನೇ ಹಂತದ 1ನೇ ಘಟಕ ಹಾಗೂ 4ನೇ ಹಂತದ 2ನೇ ಘಟಕದ ಯಂತ್ರಗಳು ಸಂಪೂರ್ಣವಾಗಿ ಸ್ಥಗಿತಗೊಂಡಿವೆ. ಹೀಗಾಗಿ ಬೆಂಗಳೂರಿನ ಕೆಲವು ಭಾಗಕ್ಕೆ ನೀರಿನ ಪೂರೈಕೆ ಸ್ಥಗಿತಗೊಳ್ಳಲಿದೆ ಎಂದು ಜಲಮಂಡಳಿ ತಿಳಿಸಿದೆ.