ಪ್ರತಾಪ್‌ಗಡ (ಉತ್ತರ ಪ್ರದೇಶ): ಸಚಿವ ಮೋತಿ ಸಿಂಗ್ ಅವರನ್ನು 'ಎನ್‌ಕೌಂಟರ್' ಮಾಡುವುದಾಗಿ ಬೆದರಿಕೆ ಹಾಕಿರುವ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಈ ವ್ಯಕ್ತಿ ನಾನು ಗ್ಯಾಂಗ್ಸ್ಟರ್. ಸಭಾಪತಿ ಯಾದವ್ ಸೋದರಳಿಯನೆಂದು ಹೇಳಿಕೊಳ್ಳುತ್ತಿದ್ದಾನೆ.
ಬೆದರಿಕೆ ಹಾಕಿರುವ ವಿಡಿಯೋದಲ್ಲಿ, ಸುಲ್ತಾನಪುರ ಜಿಲ್ಲೆಯ ಕರೌಡಿ ಕಲಾ ನಿವಾಸಿ ಆರೋಪಿ ಚಂದನ್ ಯಾದವ್ ಅಲಿಯಾಸ್ ಬಗ್ಗಾದ್ ಸುಮಾರು 50 ಜನರೊಂದಿಗೆ ಕಾಣಿಸಿಕೊಂಡಿದ್ದಾನೆ.
"ಸಭಾಪತಿ ಯಾದವ್ ಮೇರೆ ಮಾಮಾ ಲಗ್ತೇ ಹೈ. ಅಗರ್ ಉನ್ ಕೋ ಕುಚ್ ಹುವಾ ತೋ ಮೆ ಸೀದೆ ಮೋತಿ ಸಿಂಗ್ ಕಾ ಎನ್‌ಕೌಂಟರ್ ಕರೂಂಗಾ (ಸಭಾಪತಿ ಯಾದವ್ ನನ್ನ ಮಾವ. ಅವರಿಗೆ ಏನಾದರೂ ಅನಾಹುತ ಸಂಭವಿಸಿದರೆ ನಾನು ಮೋತಿ ಸಿಂಗ್ ಅವರ ಎನ್‌ಕೌಂಟರ್ ಮಾಡುತ್ತೇನೆ)" ಎಂದು ಆರೋಪಿ ವಿಡಿಯೋದಲ್ಲಿ ಹೇಳಿದ್ದಾನೆ.
ಆರೋಪಿಯ ಜೊತೆಗಿದ್ದ ಸಭಾಪತಿ ಯಾದವ್ ಅವರ ಬೆಂಬಲಿಗರು ಅವರ ಪರವಾಗಿ ಘೋಷಣೆ ಕೂಗುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ. ಮೋತಿ ಸಿಂಗ್ ಎಂದೇ ಖ್ಯಾತಿ ಪಡೆದಿರುವ ಉತ್ತರ ಪ್ರದೇಶದ ಸಚಿವ ರಾಜೇಂದ್ರ ಪ್ರತಾಪ್ ಸಿಂಗ್ ಪ್ರತಾಪಗಡದ ಪ್ಯಾಟಿ ಕ್ಷೇತ್ರದ ಶಾಸಕರಾಗಿದ್ದಾರೆ.
ವಿಡಿಯೋ ಕ್ಲಿಪ್ ಕುರಿತು ಮಾಹಿತಿ ಪಡೆದ ಪೊಲೀಸರು, ಚಂದನ್ ಯಾದವ್ ಬಗ್ಗಾದ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
"ಆರೋಪಿಗಳನ್ನು ಬಂಧಿಸಲು ನಾವು ಎರಡು ಪೊಲೀಸ್ ತಂಡಗಳನ್ನು ರಚಿಸಿದ್ದೇವೆ. ವಿಡಿಯೋದಲ್ಲಿ ಗೋಚರಿಸುವ ಇತರರನ್ನು ಕೂಡ ಗುರುತಿಸುತ್ತಿದ್ದೇವೆ" ಎಂದು ಐಜಿ ಪ್ರಯಾಗರಾಜ್ ಶ್ರೇಣಿ ಕೆ.ಪಿ. ಸಿಂಗ್ ಹೇಳಿದ್ದಾರೆ.