ಹಾಪುರ(ಉತ್ತರಪ್ರದೇಶ): ದೇಶದಲ್ಲಿ ಜಾರಿಯಲ್ಲಿದ್ದ ತ್ರಿವಳಿ ತಲಾಖ್ ಬ್ಯಾನ್ ಮಾಡಿ ಕೇಂದ್ರ ಸರ್ಕಾರ ಈಗಾಗಲೇ ಮಹತ್ವದ ನಿರ್ಧಾರ ಕೈಗೊಂಡಿದ್ದು, ಇದರ ಮಧ್ಯೆ ಕೂಡ ತಲಾಖ್ ನೀಡುವ ಅನೇಕ ಘಟನೆಗಳು ದೇಶದಲ್ಲಿ ನಡೆಯುತ್ತಿವೆ.
ಇದೀಗ ಅಂತಹ ಘಟನೆವೊಂದು ಉತ್ತರಪ್ರದೇಶದ ಹಾಪುರದಲ್ಲಿ ನಡೆದಿದೆ. ಅನಾರೋಗ್ಯದಿಂದ ಬಳಲುತ್ತಿದ್ದ ಮಗುವಿಗಾಗಿ 30 ರೂ ನೀಡಿ ಔಷಧಿ ತೆಗೆದುಕೊಂಡು ಬರುವಂತೆ ತಿಳಿಸಿದ್ದಾಳೆ. ಇಷ್ಟಕ್ಕೆ ಆಕ್ರೋಶಗೊಂಡ ಗಂಡ ಮನೆಯಲ್ಲೇ ಮೂರು ಸಲ ತಲಾಖ್ ತಲಾಖ್ ತಲಾಖ್ ಎಂದಿದ್ದಾನೆ. ಜತೆಗೆ ಮನೆಯಿಂದ ಇಬ್ಬರು ಮಕ್ಕಳು ಹಾಗೂ ಹೆಂಡತಿಯನ್ನ ಹೊರಹಾಕಿದ್ದಾಗಿ ಆಕೆ ದೂರಿನಲ್ಲಿ ತಿಳಿಸಿದ್ದಾಳೆ.
ಕಳೆದ ಮೂರು ವರ್ಷದ ಹಿಂದೆ ಇವರ ಮದುವೆಯಾಗಿದ್ದು, ಇದೀಗ ಬಕ್ರೀದ್ ಹಬ್ಬಕ್ಕೂ ಒಂದು ದಿನ ಮುಂಚಿತವಾಗಿ ಈ ಘಟನೆ ನಡೆದಿದೆ. ಮದುವೆಯಾಗುತ್ತಿದ್ದ ವೇಳೆ ಎಲ್ಲರಂತೆ ಗಂಡನ ಮನೆಯವರಿಗೆ ತಾವು ವರದಕ್ಷಿಣೆ ನೀಡಿರುವುದಾಗಿ ಸಂತ್ರಸ್ತ ಮಹಿಳೆಯ ಕುಟುಂಬಸ್ಥರು ತಿಳಿಸಿದ್ದಾರೆ. ಈಗಾಗಲೇ ಇವರಿಗೆ ಒಂದು ಗಂಡು ಹಾಗೂ ಮತ್ತೊಂದು ಹೆಣ್ಣು ಮಗುವಿದೆ. ಘಟನೆಗೆ ಸಂಬಂಧಿಸಿದಂತೆ ಹಾಪುರ್ ಕೊಟ್ವಾಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.