ಕಾನ್ಪುರ(ಉತ್ತರಪ್ರದೇಶ): ಸ್ನೇಹಿತರೊಂದಿಗೆ ಜೂಜಾಡುತ್ತಿದ್ದ ವ್ಯಕ್ತಿ ತನ್ನ ಪತ್ನಿಯನ್ನೇ ಪಣಕ್ಕಿಟ್ಟು ಸೋತಿರುವ ಘಟನೆ ಉತ್ತರಪ್ರದೇಶದ ಕಾನ್ಪುರದಲ್ಲಿ ನಡೆದಿದೆ. ಸಂತ್ರಸ್ತ ಮಹಿಳೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.
ಕಾನ್ಪುರದ ಕಲ್ಯಾಣಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಮನೆಯಲ್ಲಿ ಜೂಜಾಡುವ ವೇಳೆ ಪತಿ ತನ್ನ ಪತ್ನಿಯನ್ನೇ ತನ್ನ ಐವರು ಸ್ನೇಹಿತರ ಜೊತೆ ಪಣಕ್ಕಿಟ್ಟಿದ್ದ. ಬಳಿಕ ಸೋತಿದ್ದರಿಂದ ಪತ್ನಿಯನ್ನು ಸ್ನೇಹಿತರಿಗೆ ಒಪ್ಪಿಸಿದ್ದಾನೆ. ಬಳಿಕ ಆತನ ಸ್ನೇಹಿತರು ತನಗೆ ಲೈಂಗಿಕ ಕಿರುಕುಳ ನೀಡಲು ಶುರು ಮಾಡಿದ್ದರು. ಈ ವೇಳೆ ತಾನು ತಪ್ಪಿಸಿಕೊಂಡು ಪೊಲೀಸರಿಗೆ ಕರೆ ಮಾಡಿರುವುದಾಗಿ ಮಹಿಳೆ ಅಳಲು ತೋಡಿಕೊಂಡಿದ್ದಾಳೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಆದರೆ ಬಳಿಕ ಲಂಚ ಪಡೆದು ಆರೋಪಿಗಳನ್ನು ಬಿಡುಗಡೆಗೊಳಿಸಿದ್ದಾರೆ ಎಂದು ಸಂತ್ರಸ್ತೆ ದೂರಿದ್ದಾಳೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಪೊಲೀಸ್ ಅಧಿಕಾರಿ ಸಂಜೀವ್ ಸುಮನ್, ಘಟನೆ ಬಗ್ಗೆ ವಿವಿಧ ಸೆಕ್ಷನ್ಗಳಡಿ ಪ್ರಕರಣ ದಾಖಲಿಸಿದ್ದು ತನಿಖೆ ಮುಂದುವರೆದಿದೆ ಎಂದು ಮಾಹಿತಿ ನೀಡಿದ್ರು.