ಲಖನೌ (ಉತ್ತರಪ್ರದೇಶ) : ನಟೋರಿಯಸ್ ರೌಡಿ ವಿಕಾಸ್ ದುಬೆ ಆರ್ಭಟಕ್ಕೆ ಉತ್ತರಪ್ರದೇಶವು ಬೆಚ್ಚಿದೆ. ಪಾತಕಿಯನ್ನು ಬಂಧಿಸಲು 25ಕ್ಕೂ ಅಧಿಕ ತಂಡಗಳನ್ನು ರಚಿಸಲಾಗಿದೆ. ಡಿಎಸ್‌ಪಿ ಸೇರಿ 8 ಪೊಲೀಸರನ್ನು ಕೊಂದು ಪರಾರಿಯಾಗಿ 36 ಗಂಟೆಗಳು ಕಳೆದರೂ ಆತನನ್ನು ಇನ್ನೂ ಬಂಧಿಸಿಲ್ಲ.
ವಿಕಾಸ್ ದುಬೆಯೊಂದಿಗೆ ಸಂಪರ್ಕದಲ್ಲಿದ್ದ ಪೊಲೀಸ್ ಸಿಬ್ಬಂದಿಯನ್ನು ಗುರುತಿಸಲು ಪೊಲೀಸ್ ಅಧಿಕಾರಿಗಳು ಪ್ರಯತ್ನಿಸುತ್ತಿದ್ದು, ಕಣ್ಗಾವಲು ತಂಡವು ವಿಕಾಸ್ ದುಬೆಯೊಂದಿಗೆ ಸಂಪರ್ಕ ಹೊಂದಿದ್ದ ಕೆಲವು ಪೊಲೀಸರನ್ನು ಕರೆಗಳ ಆಧಾರದ ಮೇಲೆ ಕಂಡು ಹಿಡಿದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಕಣ್ಗಾವಲು ತಂಡವು 500ಕ್ಕೂ ಹೆಚ್ಚು ಮೊಬೈಲ್ಗಳನ್ನು ಸ್ಕ್ಯಾನ್ ಮಾಡುತ್ತಿದ್ದು, ಸುಮಾರು 60 ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾದ ದುಬೆ ಬಗ್ಗೆ ಮಾಹಿತಿ ಪಡೆದುಕೊಳ್ಳಲು ಪ್ರಯತ್ನಗಳು ನಡೆಯುತ್ತಿವೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಕಾನ್ಪುರದ ಬಿಕಾರು ಗ್ರಾಮದಲ್ಲಿರುವ ದುಬೆ ನಿವಾಸದ ಮೇಲೆ ದಾಳಿ ನಡೆಸುತ್ತಿದ್ದಾಗ, ಪಾತಕಿ ಎಂಟು ಪೊಲೀಸರನ್ನು ಗುಂಡಿಕ್ಕಿ ಕೊಂದಿದ್ದು, ಏಳು ಮಂದಿ ಗಾಯಗೊಂಡಿದ್ದಾರೆ.