ನವದೆಹಲಿ: ಉನ್ನಾವೋ ಸಾಮೂಹಿಕ ಅತ್ಯಾಚಾರ ಸಂತ್ರಸ್ತೆಯ ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಹೈದರಾಬಾದಿನಲ್ಲಿ ದಿಶಾ ಅತ್ಯಾಚಾರ ಹಾಗೂ ಕೊಲೆ ಆರೋಪಿಗಳನ್ನು ಎನ್ಕೌಂಟರ್ ಮಾಡಿದ್ದಕ್ಕೆ ದೇಶದ ಜನತೆ ಸಂಭ್ರಮಿಸುತ್ತಿದ್ದರೆ, ಇತ್ತ ಉತ್ತರ ಪ್ರದೇಶದ ಉನ್ನಾವೋ ಅತ್ಯಾಚಾರ ಸಂತ್ರಸ್ತೆ ಚಿಕಿತ್ಸೆ ಫಲಿಸದೆ ಸಫ್ದರ್ಜಂಗ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ತನ್ನ ಮೇಲಾಗಿದ್ದ ಲೈಂಗಿಕ ದೌರ್ಜನ್ಯದ ವಿರುದ್ಧ ನ್ಯಾಯಕ್ಕಾಗಿ ಹೋರಾಟ ಮಾಡುತ್ತಿದ್ದ ಸಂತ್ರಸ್ತೆ ನ್ಯಾಯಾಲಯಕ್ಕೆ ಬರುತ್ತಿದ್ದ ವೇಳೆ ಜಾಮೀನಿನ ಮೇಲೆ ಹೊರಬಂದಿದ್ದ ಇಬ್ಬರು ಅತ್ಯಾಚಾರ ಆರೋಪಿಗಳು ಸೇರಿದಂತೆ ಐವರು, ಸಂತ್ರಸ್ತೆಗೆ ಬೆಂಕಿ ಹಚ್ಚಿದ್ದರು.
ಘಟನೆಯಿಂದ ಶೇ.90ರಷ್ಟು ದೇಹ ಸುಟ್ಟು ಹೋಗಿದ್ದರಿಂದ ಬದುಕುಳಿಯುವುದು ಕಷ್ಟ ಎಂದು ವೈದ್ಯರು ಮೊದಲೇ ತಿಳಿಸಿದ್ದರು. ಕೊನೆಗೂ ಶುಕ್ರವಾರ ರಾತ್ರಿ 11:40ಕ್ಕೆ ಹೃದಯಾಘಾತದಿಂದ 23 ವರ್ಷದ ಯುವತಿ ಮೃತಪಟ್ಟಿದ್ದಾರೆ.
ಕಳೆದ ಡಿಸೆಂಬರ್ನಲ್ಲಿ ಆರು ಮಂದಿ ದುಷ್ಕರ್ಮಿಗಳು ಯುವತಿಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ ನಡೆಸಿದ್ದರು. ಮಾರ್ಚ್ ತಿಂಗಳಲ್ಲಿ ಸಂತ್ರಸ್ತೆ ಆರೋಪಿಗಳ ವಿರುದ್ಧ ದೂರು ದಾಖಲಿಸಿದ್ದರು.