ನವದೆಹಲಿ: 2017ರ ಉನ್ನಾವೋ ಅತ್ಯಾಚಾರ ಪ್ರಕರಣದ ಸಂತ್ರಸ್ತೆಯ ಹತ್ಯೆ ಪ್ರಯತ್ನಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಮಹತ್ವದ ಆದೇಶ ನೀಡಿದೆ.
ಅತ್ಯಾಚಾರ ಪ್ರಕರಣದ ಸಂತ್ರಸ್ತೆಗೆ ನಾಳೆಯೊಳಗೆ 25 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಸುಪ್ರೀಂಕೋರ್ಟ್ ಉತ್ತರ ಪ್ರದೇಶ ಸರ್ಕಾರಕ್ಕೆ ಸೂಚಿಸಿದೆ. ಜತೆಗೆ ಪ್ರಕರಣವನ್ನು ದೆಹಲಿ ಕೋರ್ಟ್ಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿರುವ ಕೋರ್ಟ್ ಮುಂದಿನ 45 ದಿನಗಳಲ್ಲಿ ಪ್ರಕರಣದ ವಿಚಾರಣೆ ನಡೆಸುವಂತೆ ಸೂಚಿಸಿದೆ. ಈ ಮಧ್ಯೆ ಮುಂದಿನ 7 ದಿನದೊಳಗೆ ಸಿಬಿಐ ವಿಚಾರಣೆ ಅಂತ್ಯಗೊಳಿಸಿ ವರದಿ ಸಲ್ಲಿಸುವಂತೆಯೂ ಹೇಳಿದ್ದು, ಸಂತ್ರಸ್ತೆ ಕುಟುಂಬ ಹಾಗೂ ವಕೀಲರಿಗೆ ಸಿಆರ್ಪಿಎಫ್ ಭದ್ರತೆ ನೀಡುವಂತೆ ನಿರ್ದೇಶನ ಕೊಟ್ಟಿದೆ.
ಪ್ರಕರಣದ ವಿಚಾರಣೆ ನಡೆಸಿರುವ ಮುಖ್ಯ ನ್ಯಾ. ರಂಜನ್ ಗೊಗೊಯ್, ಸಂತ್ರಸ್ಥೆ ಕುಟುಂಬಕ್ಕೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಬೇಕು ಎಂದು ಹೇಳಿದ್ದು, ಪ್ರತಿದಿನ ಪ್ರಕರಣದ ವಿಚಾರಣೆ ನಡೆಸುವಂತೆ ಹೇಳಿದೆ.
ಈ ಘಟನೆಗೆ ಸಂಬಂಧಿಸಿದ ಐದು ಇತರೆ ಪ್ರಕರಣಗಳನ್ನು ಸುಪ್ರೀಂಕೋರ್ಟ್, ದೆಹಲಿ ಹೈಕೋರ್ಟ್‌ಗೆ ವರ್ಗಾಯಿಸಿದೆ.
ಪ್ರಕರಣ ಸಂಬಂಧ ಬಿಜೆಪಿ ಶಾಸಕ ಕುಲ್ದೀಪ್ ಸಿಂಗ್ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿದ್ದು ತನಿಖೆ ನಡೆಯುತ್ತಿದೆ.