ಬಸ್ತಾರ್ (ಛತ್ತೀಸ್‌ಗಡ) : ದೇಶದಲ್ಲಿ ಲಾಕ್‌ಡೌನ್ ಪರಿಣಾಮದಿಂದಾಗಿ ಅಗತ್ಯ ಸೇವೆಗಳನ್ನು ಹೊರತುಪಡಿಸಿ ಎಲ್ಲಾ ಮಾದರಿಯ ವಹಿವಾಟು ಸಂಪೂರ್ಣ ಸ್ಥಗಿತವಾಗಿದೆ. ಅದೆಷ್ಟೋ ಮಂದಿ ಕಾರ್ಮಿಕರನ್ನು ಸಂಕಷ್ಟಕ್ಕೆ ದೂಡಿರುವುದಲ್ಲದೆ, ಇತ್ತ ಛತ್ತೀಸ್‌ಗಡದಲ್ಲಿ ಹತ್ತಾರು ಉದ್ಯಮಗಳಿಗೆ ಹೊಡೆತ ನೀಡಿದೆ.
ಬಸ್ತಾರ್ ಜಿಲ್ಲೆಯ ಜಗ್ದಾಲ್‌ಪುರದಲ್ಲಿ ಬುಡಕಟ್ಟು ಜನರು ಹುಣಸೆ ಹಣ್ಣು ವ್ಯಾಪಾರವನ್ನೇ ಅವಲಂಬಿಸಿದ್ದಾರೆ. ಆದ್ರೆ ಇದೀಗ ಉದ್ಯಮ ಸಂಪೂರ್ಣವಾಗಿ ಬಂದ್ ಆಗಿರುವುದರಿಂದ ಹತ್ತಾರು ಸಮಸ್ಯೆಗಳನ್ನು ಎದುರಿಸುವಂತಾಗಿದೆ.
ಏಷ್ಯಾದಲ್ಲಿಯೇ ಅತಿ ದೊಡ್ಡ ಹುಣಸೆ ಹಣ್ಣಿನ ವ್ಯಾಪಾರ ಕೇಂದ್ರವಾಗಿರುವ ಜಗ್ದಾಲ್‌ಪುರದಲ್ಲಿ ಲಾಕ್‌ಡೌನ್‌ನಿಂದಾಗಿ ಯಾವುದೇ ಮಾರುಕಟ್ಟೆ ಚಟುವಟಿಕೆಗಳು ನಡೆಯುತ್ತಿಲ್ಲ. ಇದನ್ನೇ ನೆಚ್ಚಿಕೊಂಡಿದ್ದ ಈ ಭಾಗದ ಬುಡಕಟ್ಟು ಸಮುದಾಯದ ಜನ ಮತ್ತು ಅರಣ್ಯವಾಸಿಗಳಿಗೆ ಆದಾಯ ಇಲ್ಲದಂತಾಗಿದೆ.
ಪ್ರಸ್ತುತ ಬೇಸಿಗೆ ಕಾಲದಲ್ಲೇ ಹುಣಸೆ ಹಣ್ಣು ಸಂಗ್ರಹಿಸಿ ಮಾರಾಟ ಮಾಡುತ್ತೇವೆ. 10 ಕೆಜಿಗೆ 50 ರೂಪಾಯಿ ಪಾವತಿ ಮಾಡುತ್ತೇವೆ. ಇದರಿಂದ ಬಂದ ಹಣದಿಂದ ಈ ಭಾಗದ ಗ್ರಾಮಸ್ಥರು ಜೀವನ ನಡೆಸುತ್ತಾರೆ ಅಂತ ಬುಡಕಟ್ಟು ಸಮುದಾಯದ ವ್ಯಾಪಾರಿ ಲೋಕೇಶ್ವರ್ ನಾಗ್ ವಿವರಿಸುತ್ತಾರೆ. 20 ಕೆಜಿ ಹುಣಸೆ ಮಾರಾಟ ಮಾಡಿದರೆ 120 ರೂಪಾಯಿ ಸಿಗುತ್ತೆ ಎಂದು ಮಂಡೂಕ್ ರಾಮ್ ಎಂಬುವರು ತಮ್ಮ ಸಂಕಷ್ಟ ಹೇಳಿಕೊಂಡರು.
ಕಚ್ಚಾ ಹುಣಸೆ ಹಣ್ಣನ್ನು ಜನರಿಂದ ಸಂಗ್ರಹಿಸಿದ ಬಳಿಕ ಸ್ಥಳೀಯ ಕಾರ್ಮಿಕರ ನೆರವಿನಿಂದ ಅದರಲ್ಲಿನ ಬೀಜ ಮತ್ತು ನಾರನ್ನು ಬೇರ್ಪಡಿಸಲಾಗುತ್ತದೆ. ಇದೀಗ ಕೋವಿಡ್-19 ಲಾಕ್ಡೌನ್ನಿಂದ ಈ ಎಲ್ಲಾ ವಹಿವಾಟು ಬಂದ್ ಆಗಿರುವುದರಿಂದ ವ್ಯಾಪಾರಿಗಳು, ಕಾರ್ಮಿಕರು ಪರದಾಡುವಂತಾಗಿದೆ.