ಭುವನೇಶ್ವರ(ಒಡಿಶಾ): ತೃತೀಯ ಲಿಂಗಿಗಳ ಸಮುದಾಯವನ್ನು ಸ್ವಾವಲಂಬಿಗಳನ್ನಾಗಿ ಮಾಡುವ ಪ್ರಯತ್ನದಲ್ಲಿ ಭುವನೇಶ್ವರ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಮಹತ್ವದ ಕೆಲಸ ಮಾಡಲು ಮುಂದಾಗಿದೆ.
ನಗರದ ಎರಡು ವಾಹನ ನಿಲುಗಡೆ ಸ್ಥಳಗಳನ್ನು ತೃತೀಯ ಲಿಂಗಿಗಳ ಸಂಸ್ಥೆಗೆ ವಹಿಸಿಕೊಡಲಾಗಿದ್ದು, ಅವರು ಇನ್ಮುಂದೆ ಪಾರ್ಕಿಂಗ್ ಶುಲ್ಕ ಸಂಗ್ರಹಿಸಲಿದ್ದಾರೆ.
ಬಿಎಂಸಿ ಕಮಿಷನರ್ ಪ್ರೇಮ್ ಚಂದ್ರ ಚೌಧರಿ ಅವರು ತೃತೀಯ ಲಿಂಗಿಗಳ ಸಂಸ್ಥೆಗೆ ಈ ವಾಹನ ಪಾರ್ಕಿಂಗ್ ಸ್ಥಳಗಳನ್ನು ಮಂಜೂರು ಮಾಡಿದ್ದಾರೆ. ಅಲ್ಲಿ 17 ಮಂದಿ ತೃತೀಯ ಲಿಂಗಿಗಳು ಎರಡು ತಿಂಗಳುಗಳ ಕಾಲ ಪ್ರಾಯೋಗಿಕವಾಗಿ ಈ ಕೆಲಸ ನಿರ್ವಹಿಸಲಿದ್ದಾರೆ.
ದೇಶದಲ್ಲಿ ತೃತೀಯ ಲಿಂಗಿಗಳ ಕಷ್ಟಗಳನ್ನು ಇತ್ತೀಚೆಗೆ ಅರಿತುಕೊಳ್ಳುತ್ತಿರುವ ಸರ್ಕಾರಗಳು ಅವರಿಗೆ ಗೌರವಯುತ ಬದುಕು ರೂಪಿಸಿಕೊಡುವಲ್ಲಿ ಮುಂದಾಗುತ್ತಿವೆ. ಕೇರಳದಲ್ಲಿ ಮಹತ್ವದ ಕೆಲಸವೊಂದನ್ನು ಸರ್ಕಾರ ಮಾಡಿದ್ದು, ಅಲ್ಲಿನ ಸರ್ಕಾರ ಈಗಾಗಲೇ ರಾಜ್ಯದ ಎಲ್ಲಾ ಶಾಲೆ ಹಾಗೂ ಕಾಲೇಜುಗಳಲ್ಲಿ ಶೇ.2 ರಷ್ಟು ತೃತೀಯ ಲಿಂಗಿಗಳಿಗೆ ಮೀಸಲಾತಿಯನ್ನು ಜಾರಿಗೊಳಿಸಿದೆ.
ಶಿಕ್ಷಣದಲ್ಲಿ ತೊಡಗುವ ತೃತೀಯ ಲಿಂಗಿಗಳಿಗೆ ಮಾಸಿಕ 4,000 ವಿದ್ಯಾರ್ಥಿ ನಿಲಯದ ಬಾಡಿಗೆ ನೀಡುವ ಅಲ್ಲಿನ ಸರ್ಕಾರ, ವಾರ್ಷಿಕ 20,000 ವಿದ್ಯಾರ್ಥಿ ವೇತನವನ್ನು ನೀಡಲಿದೆ. ಸರ್ಕಾರಕ್ಕೆ ಸಂಬಂಧಿಸಿದ ಹಲವು ಇಲಾಖೆಗಳ ಅರ್ಜಿಗಳನ್ನು ಪರಿಷ್ಕರಿಸಲಾಗಿದ್ದು, ಸರ್ಕಾರಿ ಇಲಾಖೆಯ ಅರ್ಜಿಗಳಲ್ಲಿ ಪುರುಷ ಮತ್ತು ಮಹಿಳೆ ಜೊತೆಗೆ ತೃತೀಯ ಲಿಂಗಿಯರಿಗೆ ಅನುಕೂಲವಾಗುವ ರೀತಿಯಲ್ಲಿ ಹೊಸ ಕಾಲಂನ್ನು ಸೇರ್ಪಡೆಗೊಳಿಸಲಾಗಿದೆ.