ಹೊಸದಿಲ್ಲಿ: ಕೆಲವೇ ಆಯ್ದ ಗ್ರಾಹಕರಿಗೆ ಮಾತ್ರ ವ್ಯಾಲಿಡಿಟಿ ವಿಸ್ತರಣೆ ಹಾಗೂ ಟಾಕ್ಟೈಮ್ ಕ್ರೆಡಿಟ್ ಸೌಲಭ್ಯಗಳನ್ನು ನೀಡುತ್ತಿರುವ ಟೆಲಿಕಾಂ ಕಂಪನಿಗಳ ಕ್ರಮಕ್ಕೆ ಟ್ರಾಯ್ ಆಕ್ಷೇಪ ವ್ಯಕ್ತಪಡಿಸಿದೆ. ಎಲ್ಲ ಪ್ರಿಪೇಡ್ ಗ್ರಾಹಕರಿಗೆ ಸಮಾನವಾಗಿ ಸೌಲಭ್ಯಗಳನ್ನು ನೀಡಬೇಕೆಂದು ವೊಡಾಫೋನ್-ಐಡಿಯಾ, ಜಿಯೊ ಹಾಗೂ ಏರ್ಟೆಲ್ ಕಂಪನಿಗಳಿಗೆ (ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ) ಟ್ರಾಯ್ ಸೂಚಿಸಿದೆ.
ಈ ಕುರಿತು ಎಲ್ಲ ಟೆಲಿಕಾಂ ಆಪರೇಟರ್ಗಳಿಗೆ ಮಾ.7 ರಂದು ಪತ್ರ ಬರೆದಿರುವ ಟ್ರಾಯ್, ತಕ್ಷಣ ಉತ್ತರ ನೀಡುವಂತೆ ಸೂಚಿಸಿದೆ. ಪ್ರಿಪೇಡ್ ಗ್ರಾಹಕರಿಗೆ ಅಬಾಧಿತ ಸೇವೆ ನೀಡಲು ಕೈಗೊಂಡ ಕ್ರಮಗಳ ಬಗ್ಗೆ ವಿವರಿಸುವಂತೆಯೂ ಟೆಲಿಕಾಂ ಕಂಪನಿಗಳಿಗೆ ಸೂಚನೆ ನೀಡಿದೆ.
ವೊಡಾಫೋನ್ ಐಡಿಯಾ ಇತ್ತೀಚೆಗೆ ತನ್ನ ಪ್ರಿಪೇಡ್ ಫೀಚರ್ ಫೋನ್ ಬಳಕೆದಾರರ ವ್ಯಾಲಿಡಿಟಿಯನ್ನು ಏ.17 ರವರೆಗೆ ವಿಸ್ತರಿಸಿ, 10 ರೂ. ಟಾಕ್ ಟೈಂ ಕ್ರೆಡಿಟ್ ನೀಡಿದೆ. ಹಾಗೆಯೇ ಏರ್ಟೆಲ್ ಕೂಡ ತನ್ನ 8 ಕೋಟಿ ಗ್ರಾಹಕರ ವ್ಯಾಲಿಡಿಟಿಯನ್ನು ಏ.17 ರವರೆಗೆ ವಿಸ್ತರಿಸಿ 10 ರೂ. ಟಾಕ್ ಟೈಂ ನೀಡಿದೆ.
ರಿಲಯನ್ಸ್ ಜಿಯೊ ಸಹ ಏಪ್ರಿಲ್ 17 ರವರೆಗೆ ಜಿಯೊ ಫೋನ್ ಬಳಕೆದಾರರಿಗೆ 100 ನಿಮಿಷಗಳ ಉಚಿತ ಟಾಕ್ ಟೈಂ, 100 ಉಚಿತ ಎಸ್ಸೆಮ್ಮೆಸ್ ಹಾಗೂ ಪ್ರಿಪೇಡ್ ವೋಚರ್ ವ್ಯಾಲಿಡಿಟಿ ಮುಗಿದ ನಂತರವೂ ಒಳಬರುವ ಕರೆಗಳಿಗೆ ಅವಕಾಶ ನೀಡಿದೆ.
"ವ್ಯಾಲಿಡಿಟಿ ಮುಗಿದಿರುವ ಹಾಗೂ ಜೀರೊ ಬ್ಯಾಲನ್ಸ್ ಇರುವ ಗ್ರಾಹಕರಿಗೆ ಮಾತ್ರ 100 ನಿಮಿಷ ಟಾಕ್ ಟೈಂ ಹಾಗೂ ಎಸ್ಸೆಮ್ಮೆಸ್ ಸೌಲಭ್ಯ ನೀಡಲಾಗಿದೆ. ಆದರೆ ವ್ಯಾಲಿಡಿಟಿ ಮುಗಿಯದ ಗ್ರಾಹಕರಿಗೆ ಈ ಸೌಲಭ್ಯ ನೀಡದೆ, ಅಂಥ ಗ್ರಾಹಕರಿಗೆ ಆಫ್ ನೆಟ್ ಕರೆ ಹಾಗೂ ಎಸ್ಸೆಮ್ಮೆಸ್ ಸೌಲಭ್ಯ ನಿರಾಕರಿಸಿದಂತಾಗಿದೆ" ಎಂದು ರಿಲಯನ್ಸ್ ಜಿಯೊಗೆ ಟ್ರಾಯ್ ಚಾಟಿ ಬೀಸಿದೆ.
ವೊಡಾಫೋನ್-ಐಡಿಯಾಗೆ ಪ್ರತ್ಯೇಕ ಪತ್ರ ಬರೆದಿರುವ ಟ್ರಾಯ್, "ಕೆಲವೇ ಆಯ್ದ ಗ್ರಾಹಕರ ವ್ಯಾಲಿಡಿಟಿ ಹೆಚ್ಚಿಸಿ, 10 ರೂ. ಟಾಕ್ ಟೈಂ ಕ್ರೆಡಿಟ್ ನೀಡಿದ್ದರಿಂದಾಗಿ ಬೇರಾವುದೇ ರಿಚಾರ್ಜ್ ಪ್ಲ್ಯಾನ್ ಇಲ್ಲದೆ 2ಜಿ ಬಳಕೆದಾರರು ತೊಂದರೆಗೀಡಾಗಿದ್ದಾರೆ" ಎಂದು ತಿಳಿಸಿದೆ.
ಲಾಕ್ಡೌನ್ನ ಈ ಸಂದರ್ಭದಲ್ಲಿ ಎಲ್ಲ ಪ್ರಿಪೇಡ್ ಗ್ರಾಹಕರಿಗೆ ಸಮಾನ ರೀತಿಯಲ್ಲಿ ಸೌಲಭ್ಯಗಳನ್ನು ವಿಸ್ತರಿಸಬೇಕು ಹಾಗೂ ಅನಿರ್ಬಂಧಿತ ಸೇವೆಗಳನ್ನು ಟೆಲಿಕಾಂ ಕಂಪನಿಗಳು ಖಾತರಿಪಡಿಸಬೇಕೆಂದು ಟ್ರಾಯ್ ನಿರ್ದೇಶನ ನೀಡಿದೆ.