ಮುಂಬೈ: 1993ರಲ್ಲಿ ಮುಂಬೈನಲ್ಲಿ ನಡೆದಿದ್ದ ಸರಣಿ ಸ್ಫೋಟ ಪ್ರಕರಣದ ಅಪರಾಧಿ ಯೂಸೂಫ್ ಮೆಮನ್ ಇಂದು ಬೆಳಗ್ಗೆ ನಾಸಿಕ್ ಜೈಲಿನಲ್ಲಿ ಸಾವನ್ನಪ್ಪಿದ್ದಾನೆ ಎಂದು ಜೈಲು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕಳೆದ ಕೆಲ ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಯೂಸೂಫ್ ಇಂದು ಬೆಳಗ್ಗೆ 10:30ಕ್ಕೆ ಹೃದಯಘಾತದಿಂದ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ. ಮರಣೋತ್ತರ ಪರೀಕ್ಷೆಗಾಗಿ ಮೃತದೇಹ ರವಾನೆ ಮಾಡಲಾಗಿದ್ದು, ವರದಿಗೋಸ್ಕರ ಕಾಯಲಾಗುತ್ತಿದೆ. 1993ರ ಮುಂಬೈ ಸರಣಿ ಸ್ಫೋಟದ ಪ್ರಮುಖ ರುವಾರಿ ಟೈಗರ್ ಮೆಮನ್ನ ಕಿರಿಯ ಸಹೋದರ ಆಗಿರುವ ಈತ ಜೈಲಿನಲ್ಲಿದ್ದರು. ಇನ್ನು ಟೈಗರ್ ಮೆಮನ್ ಪಾಕಿಸ್ತಾನದಲ್ಲಿ ಬಂಧಿಯಾಗಿದ್ದಾನೆ.
ಇವರ ಹಿರಿಯ ಸಹೋದರ ಯಾಕೂಬ್ಗೆ ಕೆಲ ವರ್ಷಗಳ ಹಿಂದೆ ನಾಗ್ಪುರ್ ಜೈಲಿನಲ್ಲಿ ಗಲ್ಲಿಗೇರಿಸಲಾಗಿತ್ತು. ಮತ್ತೋರ್ವ ಸಹೋದರ ಇಶಾಖ್ ಮೆಮನ್ ನಾಶಿಕ್ ಜೈಲಿನಲ್ಲಿದ್ದಾನೆ. 1994ರಲ್ಲಿ ಮೆಮನ್ ತಂದೆ ಅಬ್ದುಲ್ ರಜಾಕ್ ಹಾಗೂ ತಾಯಿ ಹನೀಫಾ ಸೇರಿದಂತೆ ಆರು ಮಂದಿಯನ್ನ ಬಂಧನ ಮಾಡಲಾಗಿತ್ತು. ಮುಂಬೈ ಸರಣಿ ಬಾಂಬ್ ಸ್ಫೋಟದಲ್ಲಿ 257 ಜನರು ಸಾವನ್ನಪ್ಪಿ, 1400 ಜನರು ಗಾಯಗೊಂಡಿದ್ದರು.