ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕುಲ್ಗಾಂನ ಸೇನಾ ಕಾರ್ಯಾಚರಣೆ ಕೈಗೊಂಡ ವೇಳೆ ಮನೆಯೊಂದರಲ್ಲಿ ಅಡಗಿದ್ದ ಮೂವರು ಉಗ್ರರು ಪರಾರಿಯಾಗಿರುವ ಘಟನೆ ಇಂದು ನಡೆದಿದೆ. ಅಲ್ಲದೆ, ಉಗ್ರರನ್ನು ರಕ್ಷಿಸಲು ನೂರಾರು ಮಂದಿ ಸ್ಥಳೀಯರು ಮುಂದಾದಾಗ ಗಲಭೆ ಉಂಟಾಗಿ ಹಲವರು ಗಾಯಗೊಂಡಿದ್ದಾರೆ.
ಕುಲ್ಗಾಂನ ಮನೆಯೊಂದರಲ್ಲಿ ಉಗ್ರರು ಅಡಗಿರುವ ಖಚಿತ ಮಾಹಿತಿ ಮೇರೆಗೆ ಭದ್ರತಾಪಡೆ ಕಾರ್ಯಾಚರಣೆ ಕೈಗೊಂಡಿತ್ತು. ಮೊದಲ ಸುತ್ತಿನ ಗುಂಡು ಹಾರಿಸುತ್ತಿದ್ದಂತೆ ಅಡಗಿದ್ದ ಜೈಷೆ ಮೊಹಮ್ಮದ್ನ ಮೂವರು ಉಗ್ರರು ಪರಾರಿಯಾಗಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಗ್ರಿಂದರ್ ಪಾಲ್ ಸಿಂಗ್ ಹೇಳಿದ್ದಾರೆ.
ತಾಝಿಪೊರ ಗ್ರಾಮದಲ್ಲಿ ಇಂದು ಬೆಳಗ್ಗೆ 4 ಗಂಟೆಗೆ ಭದ್ರತಾ ಪಡೆ ಹಾಗೂ ಉಗ್ರರ ನಡುವೆ ಗುಂಡಿನ ಚಕಮಕಿ ನಡೆದಿತ್ತು. ಆನಂತರ ಉಗ್ರರ ಬೆನ್ನಟ್ಟಿದ ಸಿಆರ್ಪಿಎಸ್ ಹಾಗೂ ಪೊಲೀಸರು ಮನೆಯೊಂದಲ್ಲಿ ಉಗ್ರರು ಅಡಗಿದ್ದನ್ನು ಪತ್ತೆ ಮಾಡಿದ್ದರು. ಮನೆಯನ್ನು ಸ್ಫೋಟಿಸಿ, ಒಳನುಗ್ಗಿದಾಗ ಉಗ್ರರು ಪರಾರಿಯಾಗಿದ್ದು ತಿಳಿದುಬಂದಿದೆ.
ಸ್ಥಳೀಯರ ಗಲಭೆ:
ಇನ್ನು ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸುತ್ತಿದ್ದ ಭದ್ರತಾಪಡೆ ಮೇಲೆ ನೂರಾರು ಮಂದಿ ಗಲಾಟೆ ನಡೆಸಿದ್ದರು. ಉಗ್ರರನ್ನು ಪಾರು ಮಾಡಲು ಸ್ಥಳೀಯರು ಯತ್ನಿಸಿದಾಗ ಅನಿವಾರ್ಯವಾಗಿ ಶೆಲ್ ಹಾಗೂ ಗುಂಡಿನ ದಾಳಿ ನಡೆಸಿದ್ದಾರೆ. ಈ ವೇಳೆ 40-50 ಮಂದಿ ಗಾಯಗೊಂಡಿದ್ದು, 9 ಮಂದಿಗೆ ಗಂಭೀರ ಗಾಯಗಳಾಗಿವೆ. ಎಲ್ಲರಿಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.