ಕೃಷ್ಣಾ(ಆಂಧ್ರಪ್ರದೇಶ): ರಜೆ ಸಿಕ್ಕರೆ ಸಾಕು ಮಕ್ಕಳು ಹೆತ್ತವರ ಕೈಗೆ ಸಿಗುವುದಿಲ್ಲ. ಇತರ ಮಕ್ಕಳೊಂದಿಗೆ ಆಟದಲ್ಲಿ ತಲ್ಲೀನರಾಗುತ್ತಾರೆ. ಆಟವಾಡಿದರೆ ಪರವಾಗಿಲ್ಲ. ಆದರೆ ಅದೇ ಆಟ ಹಲವು ಬಾರಿ ಮಕ್ಕಳ ಜೀವಕ್ಕೆ ಕುತ್ತು ತಂದ ಸಾಕಷ್ಟು ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ.
ಕೊರೊನಾ ಸಂಕಟದಿಂದಾಗಿ ಶಾಲೆಗಳು ಇನ್ನೂ ಪುನಾರಂಭವಾಗಿಲ್ಲ. ಹೀಗಾಗಿ ಮಕ್ಕಳಿಗೂ ಕೂಡ ರಜೆ. ಕೊರೊನಾ ಇದೆ ಮನೆಯಿಂದ ಹೊರಹೋಗಬೇಡಿ ಎಂದು ಹೆತ್ತವರು ಎಷ್ಟೇ ಹೇಳಿದರೂ ಮಕ್ಕಳು ಹೆತ್ತವರ ಕಣ್ತಪ್ಪಿಸಿಯಾದರೂ ಹೊರಗೆ ಹೋಗಿಯೇ ಹೋಗುತ್ತಾರೆ. ಆಂಧ್ರದ ಕೃಷ್ಣಾ ಜಿಲ್ಲೆಯ ಬಾಪುಲಪಡು ಸಮೀಪದ ರೆಮಲ್ಲೆ ಗ್ರಾಮ ಇಂದು ದಾರುಣ ಘಟನೆಗೆ ಸಾಕ್ಷಿಯಾಗಿದೆ.
ಮನೆಯಿಂದ ಹೊರ ಬಂದ ಮೂವರು ಮಕ್ಕಳು ಆಟವಾಡುತ್ತಾ ಮನೆಯ ಹತ್ತಿರ ನಿಲ್ಲಿಸಿದ್ದ ಕಾರಿನೊಳಗೆ ಹೋಗಿ ನಾಲ್ಕೂ ಡೋರ್ಗಳನ್ನು ಹಾಕಿಕೊಂಡಿದ್ದಾರೆ. ಆದರೆ ಅವರು ಕಾರಿನೊಳಗೆ ಹೋದ ತಕ್ಷಣ ಡೋರ್ ಲಾಕ್ ಆಗಿದೆ. ಪರಿಣಾಮ, ಮೂವರು ಮಕ್ಕಳು ಉಸಿರಾಡಲು ಸಾಧ್ಯವಾಗದೇ ಅಲ್ಲೇ ಸಾವನ್ನಪ್ಪಿದ್ದಾರೆ.
ಸಿಂಟೆಕ್ಸ್ ಕಂಪನಿಯ ನೌಕರರ ಕ್ವಾಟ್ರಸ್‌ನಲ್ಲಿ ಈ ಘೋರ ದುರಂತ ಸಂಭವಿಸಿದೆ. ಸುಹಾನಾ ಪರ್ವೀನ್, ಯಾಸ್ಮಿನ್ ಮತ್ತು ಅಫ್ಸಾನಾ ಮೃತ ಬಾಲಕಿಯರು. ಇವರೆಲ್ಲರಿಗೂ 6 ವರ್ಷ ವಯಸ್ಸು. ಇವರಲ್ಲಿ ಇಬ್ಬರು ಪಶ್ಚಿಮ ಬಂಗಾಳದವರು ಮತ್ತು ಇನ್ನೊಬ್ಬ ಬಾಲಕಿ ಅಸ್ಸಾಂನವಳು. ಮೂವರು ಮಕ್ಕಳ ದುರಂತ ಸಾವಿನಿಂದಾಗಿ ಇಡೀ ಗ್ರಾಮವೇ ಶೋಕ ಸಾಗರದಲ್ಲಿ ಮುಳುಗಿದೆ.