ಔರಂಗಾಬಾದ್: ಕೃಷ್ಣನ ವಂಶಸ್ಥರೆಂದು ಹೇಳಿಕೊಳ್ಳುವ ಮಹಾರಾಷ್ಟ್ರದ ಹಿಂಗೋಲಿ ಜಿಲ್ಲೆಯ ಗ್ರಾಮವೊಂದರ ನಿವಾಸಿಗರು ಹಾಲು ಮತ್ತು ಹಾಲಿನ ಉತ್ಪನ್ನಗಳು ಮಾರಾಟ ಮಾಡದೆ ಅಗತ್ಯವಿರುವರಿಗೆ ಉಚಿತವಾಗಿ ನೀಡಿಕೊಂಡು ಬರುತ್ತಿದ್ದಾರೆ.
ರಾಜ್ಯದ ರೈತರು ಮತ್ತು ಮುಖಂಡರು ಈ ತಿಂಗಳ ಆರಂಭದಲ್ಲಿನ ಹಾಲಿನ ಬೆಲೆ ಏರಿಕೆಯಿಂದ ಹೆದರಿದ್ದರು. ಆದರೆ, ಯೆಲೆಗಾಂವ್ ಗವಾಲಿ ನಿವಾಸಿಗರ ಬಹುತೇಕ ಮನೆಗಳಲ್ಲಿ ಜಾನುವಾರುಗಳಿದ್ದು ಎಷ್ಟೇ ದರ ಹೆಚ್ಚಳವಾದರೂ ಹಾಲು ಮಾರಾಟ ಮಾಡಿಲ್ಲ.
ಯೆಲೆಗಾಂವ್ ಗವಾಲಿ ಎಂಬ ಹಳ್ಳಿಯ ಹೆಸರಿನ ಅರ್ಥ ಹಾಲುಕರೆಯ ಹಳ್ಳಿ. ನಾವು ಶ್ರೀಕೃಷ್ಣನ ವಂಶಸ್ಥರು ಎಂದು ಪರಿಗಣಿಸಲ್ಪಟ್ಟವರು. ಆದ್ದರಿಂದ ನಾವು ಹಾಲು ಮಾರಾಟ ಮಾಡುವುದಿಲ್ಲ ಎಂದು ಗ್ರಾಮದ ನಿವಾಸಿಗಳಲ್ಲಿ ಒಬ್ಬರಾದ ರಾಜಭೌ ಮಾಂಡಡೆ (60) ಪಿಟಿಐಗೆ ತಿಳಿಸಿದ್ದಾರೆ.
ಗ್ರಾಮದಲ್ಲಿ ಶೇ 90ರಷ್ಟು ಮನೆಗಳಲ್ಲಿ ಜಾನುವಾರುಗಳಿವೆ. ಯಾವುದೇ ನಿವಾಸಿಗರು ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡುವುದಿಲ್ಲ. ತಲೆಮಾರುಗಳಿಂದ ಇದನ್ನು ಅನುಸರಿಸಿಕೊಂಡು ಬರಲಾಗುತ್ತಿದೆ ಎಂದು ಹೇಳಿದರು.
ಹೆಚ್ಚುವರಿ ಉತ್ಪಾದನೆಯ ಸಂದರ್ಭದಲ್ಲಿ ವಿಭಿನ್ನ ಹಾಲಿನ ಉತ್ಪನ್ನಗಳು ತಯಾರಿಸಲಾಗುತ್ತದೆ. ಆದರೂ ಅದು ಮಾರಾಟವಾಗುವುದಿಲ್ಲ. ಅಗತ್ಯವಿರುವ ಜನರಿಗೆ ಅವುಗಳನ್ನು ಉಚಿತವಾಗಿ ವಿತರಿಸಲಾಗುತ್ತದೆ. ಗ್ರಾಮದ ಶ್ರೀಕೃಷ್ಣ ದೇವಸ್ಥಾನದಲ್ಲಿ ಜನ್ಮಾಷ್ಟಮಿ ಹಬ್ಬವನ್ನು ವಿಜೃಂಬಣೆಯಿಂದ ಆಚರಿಸಲಾಗುತ್ತದೆ. ಕೋವಿಡ್-19 ಸಾಂಕ್ರಾಮಿಕ ಹಿನ್ನಲೆಯಲ್ಲಿ ಎಲ್ಲಾ ಕಾರ್ಯಗಳನ್ನು ರದ್ದುಗೊಳಿಸಲಾಗಿದೆ.