ಬಸ್ತರ್ (ಛತ್ತೀಸ್ಗಡ್): ದೇಶದಲ್ಲಿ ಪ್ರತಿದಿನ ಕೊರೊನಾ ಪೀಡಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಪ್ರತಿದಿನ ಕೊರೊನಾಗೆ ಅನೇಕ ಮಂದಿ ಬಲಿಯಾಗುತ್ತಿದ್ದಾರೆ. ಇನ್ನು ಕೊರೊನಾ ಭೀತಿ ಕಾರಣದಿಂದಾಗಿ ದೇಶಾದ್ಯಂತ ಶಾಲಾ ಕಾಲೇಜುಗಳು ಕೂಡಾ ಬಂದ್ ಆಗಿವೆ.
ಶಾಲೆ, ಕಾಲೇಜುಗಳು ಬಂದ್ ಆಗಿದ್ದು ಮಕ್ಕಳು ವಿದ್ಯಾಭ್ಯಾಸದಿಂದ ವಂಚಿತರಾಗಬಾರದು ಎಂಬ ಕಾರಣಕ್ಕೆ ಆನ್ಲೈನ್ ತರಗತಿ ಮಾಡಲಾಗುತ್ತಿದೆ. ಆದರೆ ಜಗದಾಲ್ಪುರ್ನ ನಕ್ಸಲ್ ಬಾಧಿತ ಪ್ರದೇಶ, ಬುಡಕಟ್ಟು ಜನಾಂಗ ವಾಸಿಸುವ ಹಾಗೂ ಇತರ ಹಿಂದುಳಿದ ಪ್ರದೇಶದ ವಿದ್ಯಾರ್ಥಿಗಳು ನೆಟ್ವರ್ಕ್ ಹಾಗೂ ಇಂಟರ್ನೆಟ್ ಸಮಸ್ಯೆ ಎದುರಿಸುತ್ತಿದ್ದಾರೆ. ಆದ್ದರಿಂದ ಬಸ್ತರ್ ಜಿಲ್ಲೆಯ ಬಟ್ಬಾಲ್ ಪಂಚಾಯತ್, ಮಕ್ಕಳ ಸಮಸ್ಯೆಗೆ ಒಂದು ಪರಿಹಾರ ಹುಡುಕಿದೆ. ಮಕ್ಕಳಿಗಾಗಿ ಊರಿನಾದ್ಯಂತ ಧ್ವನಿವರ್ಧಕಗಳ ವ್ಯವಸ್ಥೆ ಮಾಡಲಾಗಿದೆ.
ಮಾರ್ಚ್ 23 ರಿಂದ ಶಾಲೆಗಳು ಬಂದ್ ಆಗಿವೆ. ಆದರೆ ಮಕ್ಕಳು ಕಲಿಯಲು ಇದರಿಂದ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಊರಿನಾದ್ಯಂತ ಧ್ವನಿವರ್ಧಕಗಳನ್ನು ಅಳವಡಿಸಲಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ಬಹಳ ಅನುಕೂಲವಾಗಿದ್ದು ಸುತ್ತಮುತ್ತಲಿನ ಹಳ್ಳಿಗಳು ಕೂಡಾ ಇದೇ ವ್ಯವಸ್ಥೆ ಅಳವಡಿಸಿಕೊಳ್ಳಲು ನಿರ್ಧರಿಸಿವೆ.
ಬಟ್ಬಾಲ್ ಗ್ರಾಮಪಂಚಾಯಿತಿಯು ಜಿಲ್ಲಾ ಪಂಚಾಯತ್ ಸಹಯೋಗದೊಂದಿಗೆ ಊರಿನ 7 ಕಡೆ ಧ್ವನಿವರ್ಧಕಗಳನ್ನು ಅಳವಡಿಸಿದ್ದು ಮಕ್ಕಳು ಪ್ರತಿದಿನ ಪಾಠ ಕೇಳುತ್ತಿದ್ದಾರೆ. ಧ್ವನಿವರ್ಧಕಗಳಲ್ಲಿ ತಮ್ಮ ಶಿಕ್ಷಕರ ಧ್ವನಿ ಕೇಳುತ್ತಿದ್ದಂತೆ ಮಕ್ಕಳು ಪುಸ್ತಕಗಳನ್ನು ರೆಡಿ ಮಾಡಿಕೊಂಡು ನಿಗದಿತ ಸ್ಥಳಕ್ಕೆ ಬಂದು ಸೇರುತ್ತಾರೆ. ಅಷ್ಟೇ ಅಲ್ಲ ಈ ವೇಳೆ ಸ್ಯಾನಿಟೈಜರ್ ಹಾಗೂ ಮಕ್ಕಳು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ವ್ಯವಸ್ಥೆ ಮಾಡಲಾಗಿದೆ.
ಪ್ರತಿದಿನ ಬೆಳಗ್ಗೆ 8 ರಿಂದ 10 ಹಾಗೂ ಸಂಜೆ 4.30 ರಿಂದ 6.30 ವರೆಗೆ ಧ್ವನಿವರ್ಧಕಗಳ ಮೂಲಕ ಆನ್ಲೈನ್ ತರಗತಿಗಳು ನಡೆಯುತ್ತಿವೆ. ಮಕ್ಕಳು ಮಾತ್ರವಲ್ಲ, ಪೋಷಕರು ಕೂಡಾ ಶಿಕ್ಷಕರು ಏನು ಪಾಠ ಮಾಡುತ್ತಿದ್ದಾರೆ ಎಂಬುದನ್ನು ಆಲಿಸುತ್ತಿದ್ದಾರೆ. ಧ್ವನಿವರ್ಧಕಗಳನ್ನು ಅಳವಡಿಸಿರುವ ಬಟ್ಬಾಲ್ ಪಂಚಾಯತ್ ಕಾರ್ಯಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ. ನೆಟ್ವರ್ಕ್, ಇಂಟರ್ನೆಟ್ ಸಮಸ್ಯೆ ಇರುವ ಎಲ್ಲಾ ಹಳ್ಳಿಗಳಲ್ಲೂ ಈ ವ್ಯವಸ್ಥೆ ಮಾಡಲು ಛತ್ತೀಸ್ಗಡ್ ಸರ್ಕಾರ ಮುಂದಾಗಿದೆ.