ನವದೆಹಲಿ: ಇಪ್ಪತ್ತು ವರ್ಷಗಳಿಂದ ಅಕ್ಕಿ, ಗೋಧಿ, ಬೇಳೆ ಕಾಳು ಸೇರಿದಂತೆ ಯಾವುದೇ ಧವಸ ಧಾನ್ಯಗಳಿಂದ ತಯಾರಿಸಿದ ಆಹಾರಗಳನ್ನು ಸೇವಿಸದೇ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಸ್ ವಿಜಯವರ್ಗೀಯ ಎಲ್ಲೆಡೆ ಸುದ್ದಿಯಾಗಿದ್ದಾರೆ.
ಇಪ್ಪತ್ತು ವರ್ಷಗಳ ಹಿಂದೆ ವಿಜಯವರ್ಗೀಯ ಇಂದೋರ್ ಮಹಾನಗರ ಪಾಲಿಕೆಯ ಮೇಯರ್ ಆಗಿದ್ದಾಗ, ನಗರದ ವಾಸ್ತು ಸರಿ ಇರಲಿಲ್ಲವಂತೆ. ಹೀಗಾಗಿ ನಗರದ ಮೇಲಿನ ಶಾಪವನ್ನು ಹೋಗಲಾಡಿಸಲು ಅತೀ ಎತ್ತರದ ಹನುಮಾನ್ ಪ್ರತಿಮೆಯನ್ನು ಸ್ಥಾಪಿಸುವುದಾಗಿ ವಿಜಯವರ್ಗೀಯ ನಿರ್ಧಾರ ಮಾಡಿದ್ದರು. ಜೊತೆಗೆ ಪ್ರತಿಮೆ ನಿರ್ಮಾಣ ಆಗುವವರೆಗೆ ಹಣ್ಣು ಹಂಪಲು ಹೊರತು ಯಾವುದೇ ಧಾನ್ಯಗಳಿಂದ ತಯಾರಿಸಿದ ಆಹಾರವನ್ನು ಸೇವಿಸುವುದಿಲ್ಲ ಎಂದು ಶಪಥ ಮಾಡಿದ್ದರಂತೆ.
ಹೀಗಾಗಿ ಪ್ರತಿಜ್ಞೆಯಂತೆ ಇಪ್ಪತ್ತು ವರ್ಷಗಳ ಬಳಿಕ ಎಂಟು ಲೋಹಗಳಿಂದ ಕೂಡಿದ, ಸುಮಾರು 15 ಕೋಟಿ ವೆಚ್ಚದ ಬೃಹತ್ ಹನುಮಾನ್ ಪ್ರತಿಮೆ ನಿರ್ಮಾಣಗೊಂಡಿದೆ. ವಿಜಯವರ್ಗೀಯ, ವೃಂದಾವನದ ಮಹಾಮಂಡಲೇಶ್ವರ ಅವಧೇಶಾನಂದ ಗಿರಿ, ಮುರಾರಿ ಬಾಪು ಮತ್ತು ಮಹಾಮಂಡಲೇಶ್ವರ ಗುರು - ಶರಣಾನಂದರ ಸಮ್ಮುಖದಲ್ಲಿ ಖೀರ್ ಸೇವಿಸುವ ಮೂಲಕ ತನ್ನ ಶಪಥ ಪೂರ್ಣಗೊಳಿಸಿದರು.