ಕಾಸರಗೋಡು: ಕೇರಳದಲ್ಲಿ ಮೂರನೇ ಕೊರೊನಾ ವೈರಸ್ ಪ್ರಕರಣ ವರದಿಯಾಗಿರುವುದಾಗಿ ಕೇರಳ ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ದೃಢಪಡಿಸಿದ್ದಾರೆ.
ರೋಗಿಯ ಸ್ಥಿತಿ ಸ್ಥಿರವಾಗಿದ್ದು, ಕಾಸರಗೋಡಿನ ಕಾಜ್ಞಂಗಾಡ್ ಜಿಲ್ಲಾಸ್ಪತ್ರೆಯಲ್ಲಿ ಪ್ರತ್ಯೇಕ ಚಿಕಿತ್ಸಾ ಕೊಠಡಿಯಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ವ್ಯಕ್ತಿ ಕೂಡ ಚೀನಾದ ವುಹಾನ್ನಿಂದ ಕೆಲ ದಿನಗಳ ಹಿಂದೆ ರಾಜ್ಯಕ್ಕೆ ಹಿಂದಿರುಗಿ ಬಂದಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ.
ಭಾರತದಲ್ಲಿ ಈ ಹಿಂದೆ ದೃಢಪಟ್ಟಿದ್ದ ಕೊರೊನಾ ವೈರಸ್ನ ಎರಡೂ ಪ್ರಕರಣಗಳೂ ಕೇರಳದಲ್ಲೇ ವರದಿಯಾಗಿದ್ದು, ಇದೀಗ ಕೇರಳದ ಮೂರನೇ ವ್ಯಕ್ತಿ ಸೋಂಕಿನಿಂದ ಬಳಲುತ್ತಿರುವುದು ಖಚಿತವಾಗಿದೆ.
ಚೀನಾದಲ್ಲಿ ಮಹಾಮಾರಿ ಕೊರೊನಾಗೆ ಬಲಿಯಾದವರ ಸಂಖ್ಯೆ 304ಕ್ಕೆ ಏರಿದ್ದು, ಭಾರತವೂ ಸೇರಿ ಅನೇಕ ರಾಷ್ಟ್ರಗಳಲ್ಲಿ ಸೋಂಕು ಹರಡುತ್ತಿರುವುದರಿಂದ ವಿಶ್ವ ಆರೋಗ್ಯ ಸಂಸ್ಥೆಯು 'ಜಾಗತಿಕ ತುರ್ತು ಪರಿಸ್ಥಿತಿ ಘೋಷಣೆ' ಮಾಡಿದೆ.