ಕೋಲ್ಕತಾ (ಪಶ್ಚಿಮ ಬಂಗಾಳ ): ಪುರ್ಬಾ ಬರ್ಧಮಾನ್ ಜಿಲ್ಲೆಯ ದಾಮೋದರ್ ನದಿ ದಂಡೆಯಲ್ಲಿ ಬರುವ ಸುಬೋಲ್ಡಹ ಎಂಬ ಸಣ್ಣ ಕುಗ್ರಾಮಕ್ಕೂ ಜಪಾನ್‌ನ ಟೋಕಿಯೊ ನಗರಕ್ಕೂ ಭೌಗೋಳಿಕವಾಗಿ ಯಾವುದೇ ಸಂಬಂಧವಿಲ್ಲ. ಆದರೆ, ಭಾರತದ ಒಬ್ಬ ಕ್ರಾಂತಿಕಾರಿ ನಾಯಕನಿಂದ ಇಂದಿಗೂ ಸುಬೋಲ್ಡಹ ಜಪಾನೊಂದಿಗೆ ಸಂಬಂಧ ಹೊಂದಿದೆ.
ಹೌದು, ನಾವು ಇಂದು ಹೇಳುತ್ತಿರುವ ಕಥೆ ದೇಶದ ಸ್ವಾತಂತ್ರ್ಯ ಚಳವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ ಒಬ್ಬ ವ್ಯಕ್ತಿ ಮತ್ತು ಅವರು ಪರಿಚಯಿಸಿದ ಇಂಡೋ ಕರಿ ಬಗ್ಗೆಯಾಗಿದೆ. ಆ ಸ್ವಾತಂತ್ರ್ಯ ಹೋರಾಟಗಾರನೇ ಈ ರಾಶ್ ಬಿಹಾರಿ ಬೋಸ್. ಸುಬೊಲ್ಡಹ ಗ್ರಾಮದಲ್ಲಿ ಹುಟ್ಟಿ ರಾಶ್ ಬಿಹಾರಿ ಬೋಸ್ ಭಾರತಕ್ಕಿಂತ ಹೆಚ್ಚು ಟೊಕಿಯೋದಲ್ಲಿ ಬದುಕು ಸಾಗಿಸಿದ್ದಾರೆ. ಅಲ್ಲದೇ ಅವರು ಅಲ್ಲಿ ಪರಿಚಯಿಸಿದ ಭಾರತೀಯ ಖಾದ್ಯ ಇಂಡೋ ಕರಿ ಇಂದಿಗೂ ಟೋಕಿಯೋ ನಗರದ ಹೋಟೆಲ್ ಮೆನುವಿನಲ್ಲಿ ಜಾಗ ಪಡೆದಿದೆ.
ಕೋಲ್ಕತ್ತಾದಿಂದ-ಟೋಕಿಯೋವರೆಗಿನ ಬೋಸ್ ಪಯಣ:
1889 ರಲ್ಲಿ ತಾಯಿ ಮರಣ ಹೊಂದಿದ ಬಳಿಕ ಬೋಸ್ ತನ್ನ ಚಿಕ್ಕಮ್ಮ- ಚಿಕ್ಕಪ್ಪನ ಸುಪರ್ಧಿಯಲ್ಲಿ ಬೆಳೆಯುತ್ತಾರೆ. ಹೀಗೆ ಬೆಳೆದು ದೊಡ್ಡವರಾದ ಯುವ ರಾಶ್ ಬಿಹಾರಿ, ಚಂದರ್ನಗೋರ್ ಎಂಬಲ್ಲಿ ಕಾಲೇಜು ಶಿಕ್ಷಣ ಪಡೆಯತ್ತಾರೆ. ಬಳಿಕ ಡೆಹ್ರಾಡೂನ್ಗೆ ತೆರಳಿ ಅರಣ್ಯಾಧಿಕಾರಿ ಆಗುತ್ತಾರೆ. ಈ ವೇಳೆ, ಕೆಲಸ ನೋಡಿಕೊಂಡು ಸುಮ್ಮನಿರದ ಬೋಸ್, ಬ್ರಿಟಿಷರ ವಿರುದ್ಧದ ಕ್ರಾಂತಿಕಾರಿ ವಿಚಾರಗಳಲ್ಲಿ ಭಾಗಿಯಾಗುತ್ತಾರೆ. ಬಳಿಕ 1908ರಲ್ಲಿ ನಡೆದ ಅಲೀಪೋರ್ ಬಾಂಬ್ ಸ್ಪೋಟ ಪ್ರಕರಣದಲ್ಲಿ ಬಂಧನದ ಭೀತಿಯಿಂದ ಬೋಸ್ ಕೋಲ್ಕತ್ತಾದಿಂದ ಪಲಾಯಣ ಮಾಡುತ್ತಾರೆ.
ಆದರೂ ಬ್ರಿಟಿಷರ ವಿರುದ್ಧದ ಹೋರಾಟವನ್ನು ಕೈ ಬಿಡದ ಬೋಸ್ ಮತ್ತು ಅವರ ಸ್ನೇಹಿತರು , 1912ರಲ್ಲಿ ದೆಹಲಿಯ ಚಾಂದಿನಿ ಚೌಕ್ ಪ್ರದೇಶದಲ್ಲಿ ತಮ್ಮ ಯೋಜನೆಯನ್ನು ಕಾರ್ಯಗತಗೊಳಿಸಲು ಮುಂದಾಗಿ, ಬ್ರಿಟಿಷ್ ವೈಸ್ರಾಯ್ ಲಾರ್ಡ್ ಹಾರ್ಡಿಂಗ್ ಎಂಬಾತನ ಗಾಡಿಗೆ ಬಾಂಬ್ ಎಸೆಯುತ್ತಾರೆ. ಘಟನೆಯಲ್ಲಿ ಹಾರ್ಡಿಂಗ್ ಕೂದಲೆಳೆ ಅಂತರದಲ್ಲಿ ಪ್ರಾಣಪಾಯದಿಂದ ಪಾರಾಗುತ್ತಾನೆ. ಈ ಪ್ರಕರಣದಲ್ಲಿ ಬೋಸ್ನ ಸ್ನೇಹಿತರಾದ ಲಾಲಾ ವಸಂತ್ ರಾಯ್, ಬಸಂತ ಕುಮಾರ್ ಬಿಸ್ವಾಸ್, ಬಾಲ್ ಮುಕುಂದ್, ಅಮೀರ್ಚಂದ್ ಮತ್ತು ಅವಧ್ ಬಿಹಾರಿ ಸಿಕ್ಕಿಬಿದ್ದರು. ಲಾಲಾ ವಸಂತ್ ಹೊರತುಪಡಿಸಿ ಉಳಿದವರೆಲ್ಲರನ್ನು ಗಲ್ಲಿಗೇರಿಸಲಾಯಿತು. ರಾಶ್ ಬಿಹಾರಿ ಓಡಿಹೋಗಿ ಭೂಗತರಾದರು. ಈ ವೇಳೆಗಾಗಲೇ ಬೋಸ್ ಬ್ರಿಟಿಷ್ ಪೊಲೀಸರಿಗೆ ಮೋಸ್ಟ್ ವಾಟೆಂಡ್ ವ್ಯಕ್ತಿಯಾಗಿದ್ದರು.
ಭಾರತದಿಂದ ಪಲಾಯನ ಮಾಡಿದ ರಾಶ್ ಬಿಹಾರಿ ಬೋಸ್ :
ಜೂನ್ 8,1915 ರಂದು ಪ್ರಿಯನಾಥ್ ಬೋಸ್ ಎಂದು ಹೆಸರು ಬದಲಾಯಿಸಿಕೊಂಡು ಜಪಾನ್ ಕೋಬೆಯ ಬಂದರಿಗೆ ರಾಶ್ ಬಿಹಾರಿ ತಲುಪುತ್ತಾರೆ. ಬಳಿಕ ಅಲ್ಲಿಂದ ರೈಲಿನ ಮೂಲಕ ಟೋಕಿಯೋಗೆ ಪ್ರಯಾಣ ಬೆಳೆಸುತ್ತಾರೆ. ಟೋಕಿಯೋದಲ್ಲಿ ರಾಷ್ಟ್ರೀಯವಾದಿ ಸನ್ ಯಾಟ್-ಸೇನ್ ಪರಿಚಯ ಮಾಡಿಕೊಂಡ ಬೋಸ್, ಅವರ ಮೂಲಕ ತಂಗಲು ವ್ಯವಸ್ಥೆ ಮಾಡಿಕೊಳ್ಳುತ್ತಾರೆ. ಟೋಕಿಯೋ ಸೇರಿದರೂ ಭಾರತದಲ್ಲಿದ್ದ ಬ್ರಿಟಿಷರ ವಿರುದ್ಧ ಸಮರ ಮುಂದುವರೆಸಿದ ಬೋಸ್, ಅಲ್ಲಿದಂಲೇ ಭಾರತದ ಕ್ರಾಂತಿಕಾರಿಗಳಿಗೆ ಶಸ್ತ್ರಾಸ್ತ್ರ ಪೂರೈಕೆಗೆ ಸಹಾಯ ಮಾಡುತ್ತಾರೆ. ಈ ವೇಳೆಗಾಗಲೇ ಬೋಸ್ಗೆ ಜಪಾನಿನ ಪ್ರಸಿದ್ಧ ರಾಜಕಾರಣಿ ಮಿತ್ಸುರು ಟೊಯಾಮಾ ಪರಿಚಯವಾಗುತ್ತಾರೆ.
ಅಷ್ಟರಲ್ಲಾಗಲೇ ಬ್ರಿಟಿಷರು ಜಪಾನ್‌ನ ಟೋಕಿಯೋದಲ್ಲಿರುವ ಪ್ರಿಯನಾಥ್ ಬೋಸ್ ಬೇರೆ ಯಾರೂ ಅಲ್ಲ, ರಾಶ್ ಬಿಹಾರಿ ಬೋಸ್ ಎಂದು ಕಂಡು ಹಿಡಿಯುತ್ತಾರೆ. ಬೋಸ್ ಅವರನ್ನು ಗಡಿ ಪಾರು ಮಾಡುವಂತೆ ಜಪಾನ್ಗೆ ತಿಳಿಸುತ್ತಾರೆ. ಆದರೆ, ಕೊನೆ ಕ್ಷಣದಲ್ಲಿ ಗಡಿಪಾರಿನಿಂದ ಬೋಸ್ ತಪ್ಪಿಸಿಕೊಳ್ಳುತ್ತಾರೆ. ಈ ವೇಳೆ ರಾಶ್ ಬಿಹಾರಿಯ ಸಹಾಯಕ್ಕೆ ಬಂದ ರಾಜಕಾರಾಣಿ ಮಿತ್ಸುರು, ರಾಶ್ ಬಿಹಾರಿ ಮತ್ತು ಅವರ ಒಡನಾಡಿ ಹೆರಾಂಬಲಾಲ್ ಗುಪ್ತವಾಗಿ ಉಳಿಯಲು ಶಿಂಜುಕು ಪ್ರಾಂತ್ಯದ ಪ್ರಸಿದ್ಧ ಸೋಮಾ ಕುಟುಂಬ ನಡೆಸುತಿದ್ದ ನಕಮುರಾಯ ಬೇಕರಿಯ ಹಿಂದಿನ ಸ್ಟುಡಿಯೋ ಅಪಾರ್ಟ್ಮೆಂಟ್ನಲ್ಲಿ ತಂಗಲು ವ್ಯವಸ್ಥೆ ಮಾಡಿಕೊಡುತ್ತಾರೆ.
ಇಂಡೋ ಕರಿಯ ಹುಟ್ಟು:
ಅಲ್ಲೇ ಜೀವನ ಮುಂದುವರೆಸಿದ ಬೋಸ್, ದಿನಕಳೆದಂತೆ ನಕಮುರಾಯ ಬೇಕರಿಯ ಮಾಲಕೀಯಾದ ಕೊಕ್ಕೊಗೆ, ತುಂಬಾ ಆತ್ಮಿಯರಾಗುತ್ತಾರೆ. ಅಂತಿಮವಾಗಿ ಜುಲೈ 9,1919 ರಂದು ಕೊಕ್ಕೊ ಅವರ ಹಿರಿಯ ಮಗಳಾದ ತೋಶಿಕೊ ಅವರನ್ನು ಬೋಸ್ ವಿವಾಹವಾಗುತ್ತಾರೆ. ಬ್ರಿಟಿಷ್ ದೌರ್ಜನ್ಯ ತಡೆಯಲಾಗದ ಬೋಸ್ ದಂಪತಿ ಆಗಾಗ ತಮ್ಮ ವಾಸಸ್ಥಳವನ್ನು ಬದಲಾಯಿಸಬೇಕಾಗಿ ಬಂತು. ಈ ಮಧ್ಯೆ ತೋಶಿಕೊ ಮತ್ತು ರಾಶ್ ಬಿಹಾರಿ ದಂಪತಿ ಇಬ್ಬರು ಮಕ್ಕಳಿಗೆ ಪೋಷಕರಾಗುತ್ತಾರೆ. ಎರಡನೇ ಮಗುವಿಗೆ ಜನ್ಮ ನೀಡಿದ ಮೂರು ವರ್ಷಗಳ ಬಳಿಕ ಬೋಸ್ ಪತ್ನಿ ತೋಶಿಕೊ ತನ್ನ 28 ನೇ ವಯಸ್ಸಿನಲ್ಲಿ ನ್ಯುಮೋನಿಯಾದಿಂದ ಮರಣ ಹೊಂದುತ್ತಾರೆ.
ಈ ವೇಳೆ, ಭಾರತದಲ್ಲಿ ಇನ್ನೊಬ್ಬ ಕ್ರಾಂತಿಕಾರಿ ಸುಭಾಸ್ ಚಂದ್ರ ಬೋಸ್ ಅವರ ಆಗಮನವಾಗುತ್ತದೆ. ಈ ವೇಳೆ ಭಾರತೀಯ ಸೈನ್ಯದ ನಿಯಂತ್ರಣವನ್ನು ಸುಭಾಸ್ ಚಂದ್ರ ಬೋಸ್ ಅವರಿಗೆ ಒಪ್ಪಿಸಿ, ರಾಶ್ ಬಿಹಾರಿ ಟೋಕಿಯೊದಲ್ಲೇ ಉಳಿಯುತ್ತಾರೆ. ಈ ಮಧ್ಯೆ ತನ್ನ ಅತ್ತೆ ಕೊಕ್ಕೊಗೆ ಸಹಾಯ ಮಾಡಲೆಂದು ನಕಮುರಾಯ ಬೇಕರಿಯ ಮೊದಲ ಮಹಡಿಯಲ್ಲಿ ಬೋಸ್ ಒಂದು ಸಣ್ಣ ರೆಸ್ಟೋರೆಂಟ್ ತೆರೆಯುತ್ತಾರೆ. ಇಲ್ಲಿ ಭಾರತೀಯ ಶೈಲಿಯ ಚಿಕನ್ ಕರಿಯನ್ನು ಬೋಸ್ ಪರಿಚಯಿಸುತ್ತಾರೆ. ಆರಂಭದಲ್ಲಿ ಜಪಾನಿಗರಿಂದ ಬೋಸ್ ಖಾದ್ಯಕ್ಕೆ ಅಷ್ಟೊಂದು ಪ್ರತಿಕ್ರಿಯೆ ಬರದಿದ್ದರೂ, ಬಳಿಕ ಅದು ಜಪಾನಿಗರಿಗೆ ಅತ್ಯಂತ ಪ್ರಿಯ ಖಾದ್ಯವಾಯಿತು. ಹೀಗಾಗಿ 1927ರಿಂದ ಭಾರತ ಚಿಕನ್ ಕರಿ ಜಪಾನ್‌ನ ಮೆನುವಿನಲ್ಲಿ ಶಾಶ್ವತ ಸ್ಥಾನ ಪಡೆಯಿತು. ಬೋಸ್ ಪರಿಚಯಿಸಿದ ಇಂಡೋ ಕರಿ ಇಂದಿಗೂ ಜಪಾನಿನಲ್ಲಿದೆ.