ಸ್ವತಂತ್ರ ಭಾರತದ ಪೂರ್ವದ ರಾಷ್ಟ್ರೀಯ ಚಳವಳಿಯ ಆರಂಭಿಕ ಹಂತಗಳಲ್ಲಿ ಸಾಮೂಹಿಕ ಜನಾಂದೋಲನ ಮೂಡಿಸುವಲ್ಲಿ ಹಾಗೂ ಜನರನ್ನು ಒಗ್ಗೂಡಿಸುವಲ್ಲಿ ಅಂದಿನ ಪತ್ರಿಕೆಗಳು ಪ್ರಮುಖ ಪಾತ್ರವಹಿಸಿದ್ದವು. ರಾಜಕೀಯ ಪ್ರಚಾರ, ಶಿಕ್ಷಣದ ಮಹತ್ವ ಹಾಗೂ ವಸಾಹತುಶಾಹಿಗಳ ಪ್ರಾಬಲ್ಯವನ್ನು ಎದುರಿಸುತ್ತಾ ರಾಷ್ಟ್ರೀಯವಾದ ಸಿದ್ಧಾಂತವನ್ನು ಪ್ರತಿಪಾದಿಸಿದ್ದವು. ನಿರ್ಭೀತ ಪತ್ರಕರ್ತರಿಂದಾಗಿ ಆ ಅವಧಿಯಲ್ಲಿ ಪ್ರಬಲ ಪತ್ರಿಕೆಗಳು ಹೊರಬಂದವು. ವಾಸ್ತವದಲ್ಲಿ ಯಾವುದೇ ಒಂದು ಪ್ರಮುಖ ರಾಜಕೀಯ ನಾಯಕರು ಆ ವೇಳೆ ಅಸ್ತಿತ್ವದಲ್ಲಿ ಇರಲಿಲ್ಲ.
ಮಹಾತ್ಮ ಗಾಂಧಿಜೀಯವರು ದಕ್ಷಿಣ ಆಫ್ರಿಕಾದಲ್ಲಿ ಇದ್ದಾಗಿನಿಂದಲೂ ಪತ್ರಿಕೋದ್ಯಮದೊಂದಿಗೆ ಸಂವಹನ ಇರಿಸಿಕೊಂಡಿದ್ದರು. 1903ರಿಂದ ಆರಂಭವಾಗಿ 45 ವರ್ಷಗಳ ಅವಧಿಯವರೆಗೂ ಗಾಂಧಿಯವರು ಹಲವು ಪತ್ರಿಕೆಗಳಿಗೆ ಲೇಖನ ಬರೆದಿದ್ದಾರೆ. ಅವರು ಬರೆದಿದ್ದ ಗುಣಮಟ್ಟ ಗಮನಿಸಿದರೆ ಅವರೊಬ್ಬರು ಶ್ರೇಷ್ಠ ಪತ್ರಕರ್ತರು ಎಂಬುದು ಸಾಬೀತಾಗುತ್ತದೆ. ನಿರ್ಭೀತಿಯ ಪತ್ರಕರ್ತನಾಗಿ, ಬದ್ಧತೆಯುಳ್ಳ ಸಂಪಾದಕರಾಗಿ ಅತ್ಯುತ್ತಮವಾದ ಸಂಗತಿಗಳನ್ನು ಸೊಗಸಾಗಿ ಬರೆದಿದ್ದಾರೆ.
1903ರಿಂದ 1914ರವರೆಗೆ ಮತ್ತು 1919ರಿಂದ 1948ರ ಅವಧಿಯಲ್ಲಿ ಗುಜರಾತಿ, ಇಂಗ್ಲಿಷ್ ಸೇರಿದಂತೆ ಇತರೆ ಭಾಷೆಗಳಲ್ಲಿ ವಾರಪತ್ರಿಕೆಗಳನ್ನು ಪ್ರಕಟಿಸಿದ್ದರು. ಭಾರತದಲ್ಲಿ ಅವರು 'ಯಂಗ್ ಇಂಡಿಯಾ', 'ನವಜೀವನ್', 'ಹರಿಜನ್' ಮತ್ತು ಇತರೆ ಅನೇಕ ಜರ್ನಲ್‌ಗಳಲ್ಲಿ ತಮ್ಮ ಅಭಿಪ್ರಾಯಗಳನ್ನು ನಿರ್ಭೀತಿಯಿಂದ ವ್ಯಕ್ತಪಡಿಸಿ ಬರೆದಿದ್ದಾರೆ. ಅವರು ಬರೆದ ಬರಹಗಳು ಅವರನ್ನು ಉನ್ನತ ಸ್ಥಾನಕ್ಕೆ ಕರೆದೊಯ್ದಿವೆ.
1893ರಲ್ಲಿ ಗಾಂಧೀಜಿಯವರು ದಕ್ಷಿಣ ಆಫ್ರಿಕಾದಲ್ಲಿ ಇದ್ದಾಗ, ಸ್ಥಳೀಯ ಭಾರತೀಯ ಸಮುದಾಯದ ಹಿತಾಸಕ್ತಿಗಳನ್ನು ರಕ್ಷಿಸಲು ಹಾಗೂ ಹದಗೆಡುತ್ತಿರುವ ಭಾರತೀಯರ ಜೀವನ ಸ್ಥಿತಿಯನ್ನು ಸುಧಾರಣೆಗೆ ತಂದು ಇಲ್ಲಿನ ಪರಿಸ್ಥಿತಿಯನ್ನು ಭಾರತ ಸರ್ಕಾರಕ್ಕೆ ತಿಳಿಸುವ ಉದ್ದೇಶದಿಂದ ನಟಾಲ್ ಇಂಡಿಯನ್ ಕಾಂಗ್ರೆಸ್ (ಎನ್‌ಐಸಿ) ಸ್ಥಾಪಿಸಿದರು. ಸ್ಥಳೀಯ ಭಾರತೀಯರ ಕುಂದುಕೊರತೆಗಳನ್ನು ಸಾರಲು ಎನ್‌ಐಸಿ, ತನ್ನದೇ ಆದ ಪತ್ರಿಕೆ ಹೊರಡಿಸಲು ಬಯಸಿತ್ತು. ಆದರೆ, ಆರಂಭದಲ್ಲಿ ಅದು ಸಾಧ್ಯವಾಗಲಿಲ್ಲ. 1896ರಲ್ಲಿ ಬೋಯರ್ ಯುದ್ಧ ನಂತರ ಪತ್ರಿಕೆಯ ಅತ್ಯಗತ್ಯವಾಗಿ ತರಬೇಕಾಯಿತು. ಗಾಂಧೀಜಿಯವರು ತಮ್ಮ ಪ್ರಮುಖ ರಾಜಕೀಯ ಸಹೋದ್ಯೋಗಿಗಳು ಮತ್ತು ಸಹಚರರೊಂದಿಗೆ ವಾರಪತ್ರಿಕೆ ಆರಂಭಿಸಲು ನಿರ್ಧರಿಸಿದರು.
1903ರ ಜೂನ್‌ನಲ್ಲಿ ಡರ್ಬನ್‌ನಿಂದ 'ಇಂಡಿಯನ್ ಓಪಿನಿಯನ್' (ಭಾರತೀಯ ಅಭಿಪ್ರಾಯ) ಪತ್ರಿಕೆ ಆರಂಭಿಸಿದರು. ವರ್ಣಭೇದ ನೀತಿಯನ್ನು ತೊಡೆದುಹಾಕಲು. ಬಿಳಿಯರ ಆಡಳಿತದಲ್ಲಿನ ಜನಾಂಗೀಯ ಅಸಹಿಷ್ಣುತೆಯ ವಿರುದ್ಧ ಸ್ಥಳೀಯ ಭಾರತೀಯರ ಭಾವನೆಗಳಿಗೆ ಸ್ಪಂದಿಸಲು ಆರಂಭವಾದ 'ಇಂಡಿಯನ್ ಓಪಿನಿಯನ್' ಉತ್ತಮವಾಗಿ ಕೆಲಸ ಮಾಡಿತು. ಆಂತರಿಕ ಶಕ್ತಿಯನ್ನು ಎದುರಿಸಲು ಪತ್ರಿಕೆಯ ಅವಶ್ಯಕತೆಯ ಮಹತ್ವ ಅರಿತ ಗಾಂಧೀಜಿಯವರು ಅದನ್ನು ಸಂಪೂರ್ಣವಾಗಿ ತಮ್ಮ ಸ್ವಾಧೀನಕ್ಕೆ ತೆಗೆದುಕೊಂಡರು. ಇಷ್ಟೆಲ್ಲ ಇದ್ದರೂ ಸ್ಥಳೀಯ ಭಾರತೀಯ ಸಮುದಾಯದವರಿಗೆ ಪರಿಣಾಮಕಾರಿಯಾದ ಶಿಕ್ಷಣ ಕೊಡಿಸಲು ಸಾಧ್ಯವಾಗಲಿಲ್ಲ.
ಬಾಂಬೆನ (ಮುಂಬೈ) ನೀವೃತ್ತ ಶಾಲಾ ಶಿಕ್ಷಕ, ಬಾಂಬೆಯ ಪತ್ರಕರ್ತ ಮತ್ತು ಇಂದಿನ ಇಂಟರ್ನ್ಯಾಷನಲ್ ಪ್ರಿಂಟಿಂಗ್ ಪ್ರೆಸ್ ಆಗಿನ ಮಾಲೀಕರಾಗಿದ್ದ ಮದಂಜಿತ್ ವ್ಯವಾಹರಿಕ್ ಅವರ ಜೊತೆಗೂಡಿ ಇಂಡಿಯನ್ ಓಪಿನಿಯನ್ ಪತ್ರಿಕೆ ಆರಂಭಿಸಿದರು. ಇದರ ಮೊದಲ ಸಂಪಾದಕರಾಗಿದ್ದ ಮನ್ಸುಖ್ಲಾಲ್ ಹಿರಾಲಾಲ್ ನಜರ್ ನೇತೃತ್ವದಲ್ಲಿ 1903ರ ಜೂನ್ 4ರಂದು ಮೊದಲ ಸಂಚಿಕೆ ಹೊರಬಂತು. ಆರಂಭದಲ್ಲಿ ಇಂಗ್ಲಿಷ್, ಹಿಂದಿ, ಗುಜರಾತಿ ಮತ್ತು ತಮಿಳು ಭಾಷೆಗಳಲ್ಲಿ ಪ್ರಕಟವಾಯಿತು. ನಜರ್ ಮತ್ತು ಮದಂಜಿತ್ ಪತ್ರಿಕೆ ಮುದ್ರಣ ನೋಡಿಕೊಳ್ಳುತ್ತಿದ್ದರೇ ಪತ್ರಿಕೆಯ ಬಹುಪಾಲು ಭಾಗವನ್ನು ಗಾಂಧೀಜಿಯವರೇ ಬರೆದಿದ್ದಾರೆ. ದಕ್ಷಿಣ ಆಫ್ರಿಕಾದಲ್ಲಿದ್ದು ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಅವ್ಯವಸ್ಥೆಗೆ ಸಂಬಂಧಿಸಿದ ಹಲವು ಪ್ರಶ್ನೆಗಳನ್ನು ಎತ್ತಲು ಪ್ರಯತ್ನಿಸಿದ್ದಾರೆ.
ಪತ್ರಿಕೋದ್ಯಮದ ಬಗ್ಗೆ ಗಾಂಧೀಜಿಯವರು ಸ್ಪಷ್ಟವಾದ ನಿಲುವು ಮತ್ತು ತಮ್ಮದೆಯಾದ ವ್ಯಾಖ್ಯಾನ ಹೊಂದಿದ್ದರು. ವಿಚಾರಗಳನ್ನು ನೇರವಾಗಿ ಮಂಡಿಸುತ್ತಿದ್ದರು. ಪತ್ರಿಕೋದ್ಯಮ ಅತ್ಯುತ್ತಮವಾದ ವೃತ್ತಿಯೆಂದು ಭಾವಿಸಿದ್ದರು. ಜನಸಾಮಾನ್ಯರ ಅವಸ್ಥೆ, ಪರಿಸ್ಥಿತಿ ಮತ್ತು ಸಂದರ್ಭ ಹಾಗೂ ಭಾವನೆಗಳನ್ನು ಅರ್ಥಮಾಡಿಕೊಳ್ಳುವುದು. ನಂತರ ಅವರಿಗೆ ಪರಿಣಾಮಕಾರಿಯಾಗಿ ಅಭಿಪ್ರಾಯ ಕೊಡುವುದು. ಶಿಕ್ಷಣ ಮತ್ತು ಅರಿವಿನ ಮೂಲಕ ಜನರಲ್ಲಿ ಸಾಮಾಜಿಕ-ರಾಜಕೀಯ ಭಾವನೆಗಳು ಮತ್ತು ವರ್ತನೆಗಳ ಬಗ್ಗೆ ತಿಳಿಸಿಸುವುದು. ವಸಾಹತುಶಾಹಿ ಆಡಳಿತದ ದೋಷ ಮತ್ತು ನ್ಯೂನತೆ ಹಾಗೂ ದಬ್ಬಾಳಿಕೆ ಮತ್ತು ಶೋಷಣೆಯನ್ನು ನಿರ್ಭಯವಾಗಿ ಬಹಿರಂಗಪಡಿಸುವುದು. ಇವುಗಳನ್ನು ವಿರೋಧಿಸಲು ಮತ್ತು ಹೋರಾಡಲು ಜನರನ್ನು ಅಣಿಗೊಳಿಸುವುದಕ್ಕಾಗಿ ಪತ್ರಿಕೆಯನ್ನು ಬಳಸಿಕೊಳ್ಳಬೇಕು ಎಂಬ ಚಿಂತನೆಯಲ್ಲಿ ಸಾಗಿದ್ದರು. ಪತ್ರಿಕೆಯನ್ನು ಯಾವತ್ತೂ ಜಾಹೀರಾತುಗಳ ಹಾದಿಯಲ್ಲಿ ಕೊಂಡೊಯ್ಯಲಿಲ್ಲ. ಓದುಗರ ಮೇಲೆ ಕೇಂದ್ರೀಕೃತವಾಗಿ ಪತ್ರಿಕೆಯನ್ನು ನಡೆಸಿಕೊಂಡು ಬಂದಿದ್ದರು.
ಇಂಡಿಯನ್ ಓಪಿನಿಯನ್, 'ಬ್ರಿಟಿಷ್ ನ್ಯಾಯದಾನ ವಿಧಾನ ಮೇಲೆ ಅಪಾರ ನಂಬಿಕೆ ಮತ್ತು ಸಾಂವಿಧಾನಿಕ ವಿಧಾನಗಳ ಮೂಲಕ ಭಾರತೀಯರಿಗೆ ಪರಿಹಾರ ಕ್ರಮಗಳನ್ನು ಹುಡುಕುವ ಪ್ರಯತ್ನಗಳಿಗೆ ಬದ್ಧವಾಗಿ ಇರುವುದಾಗಿ ಘೋಷಿಸಿಕೊಂಡಿತು. ಬ್ರಿಟಿಷ್ ವಸಾಹತುಶಾಹಿ ಆಡಳಿತದ ಅಂತರ್ಗತ ಉತ್ತಮವಾಗಿದೆ. ನ್ಯಾಯ, ಜನಾಂಗೀಯ ಸಮಾನತೆ ಮತ್ತು ಸ್ವಾತಂತ್ರ್ಯದ ಮೌಲ್ಯವನ್ನು ಆಧರಿಸಿದೆ ಎಂದು ಗಾಂಧೀಜಿಯವರು ದೃಢವಾಗಿ ನಂಬಿದ್ದರು. ಇಂಡಿಯನ್ ಓಪಿನಿಯನ್ ಪತ್ರಿಕೆಯು ದಕ್ಷಿಣ ಆಫ್ರಿಕಾದಲ್ಲಿ ಬ್ರಿಟಿಷ್ ವಸಾಹತುಶಾಹಿ ಆಳ್ವಿಕೆಯಲ್ಲಿ ಭಾರತೀಯರು ಅನುಭವಿಸಿದ ನೋವುಗಳ ಐತಿಹಾಸಿಕ ದಾಖಲೆಗಳನ್ನು ಒದಗಿಸುತ್ತದೆ. ಭಾರತೀಯ ಸಮುದಾಯದ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಜೀವನದ ಅತ್ಯಮೂಲ್ಯವಾದ ದಾಖಲೆ ಸಹ ಆಗಿದೆ.
1904ರಲ್ಲಿ ಗಾಂಧಿ ಅವರು ಡರ್ಬನ್‌ನಿಂದ ಸ್ವಲ್ಪ ದೂರದಲ್ಲಿರುವ ಬೇರೊಂದು ಪ್ರದೇಶಕ್ಕೆ ಹೋರಟರು. ಇತಿಹಾಸದಲ್ಲಿ ಇದೊಂದು ಮಹತ್ವದ ಘಟನೆ. ಆಶ್ರಮ ಎಂಬ ಈ ಪ್ರದೇಶದಲ್ಲಿ ಗಾಂಧೀಜಿಯವರು ಲಿಯೋ ಟಾಲ್‌ಸ್ಟಾಯ್ ಮತ್ತು ಜಾನ್ ರಸ್ಕಿನ್ ಅವರ ಆಲೋಚನೆಳಿಂದ ಪ್ರಭಾವಿತರಾದರು. ನಗರ ಜೀವನದಿಂದ ಹಿಮ್ಮುಖರಾದ ಗಾಂಧೀಜಿ, ಸರಳ, ಕಠಿಣ ಮತ್ತು ಸಮುದಾಯ ಜೀವನ ವಿಧಾನ ಆರಿಸಿಕೊಂಡರು. ಫೀನಿಕ್ಸ್ ಪತ್ರಿಕೆಯ ಕೆಲಸಗಾರರು ಇಂಡಿಯನ್ ಓಪಿನಿಯನ್ ಪತ್ರಿಕೆಯೊಂದಿಗೆ ಜಂಟಿಯಾಗಿ ಕೆಲಸ ಮಾಡಲು ಆರಂಭಿಸಿದರು. ತಮ್ಮ ಮೇಲೆ ಪ್ರಭಾವ ಬೀರಿದ ಲಿಯೋ ಟಾಲ್‌ಸ್ಟಾಯ್, ಹೆನ್ರಿ ಡೇವಿಡ್ ಥೋರೊ, ಜಾನ್ ರಸ್ಕಿನ್ ಮತ್ತು ಇತರ ಶ್ರೇಷ್ಠ ಚಿಂತಕರ ಬರಹಗಳು ಹಾಗೂ ಆಲೋಚನೆಗಳನ್ನು ಇಂಡಿಯನ್ ಓಪಿನಿಯನ್ನಲ್ಲಿ ಅಚ್ಚಾಕಿಸಿದರು.
ಇಪ್ಪತ್ತನೆಯ ಶತಮಾನದ ಆರಂಭಿಕ ವರ್ಷಗಳಲ್ಲಿ ಏಕ ಭಾರತೀಯ ಮತ್ತು ರಾಷ್ಟ್ರೀಯತೆಯನ್ನು ಬೆಳೆಸಲು ಇಂಡಿಯನ್ ಓಪಿನಿಯನ್ ಪ್ರಬಲ ವೇದಿಕೆಯಾಯಿತು. ಭಾಷೆ, ಪ್ರಾದೇಶಿಕ, ಧರ್ಮ, ಸಮುದಾಯ, ಗಡಿಯನ್ನು ಮೀರಿ ಇಂಡಿಯನ್ ಓಪಿನಿಯನ್ ಎಲ್ಲರೂ ಓದುವಂತಾಯಿತು. ವಲಸಿಗ ಭಾರತೀಯ ಕಾರ್ಮಿಕರ ಶೋಚನಿಯ ಬದುಕು, ಕಾರ್ಮಿಕರ ಮೇಲೆ ಉದ್ಯೋಗದಾತರ ಕಠಿಣ ವರ್ತನೆಗಳು, ಕಳಪೆ ಸವಲತ್ತುಗಳ ವಿರುದ್ಧ ಇಂಡಿಯನ್ ಓಪಿನಿಯನ್ ತನ್ನ ಸಂಪಾದಕೀಯದಲ್ಲಿ ಮನೋಚವಾಗಿ ಪ್ರಕಟಿಸಿತ್ತು. ದಬ್ಬಾಳಿಕೆ ಮತ್ತು ಶೋಷಣೆಯನ್ನು ಕೊನೆಗೊಳಿಸಲು ವಿಶೇಷ ಅಭಿಯಾನ ಆರಂಭಿಸಿತು. ಇಂಡಿಯನ್ ಓಪಿನಿಯನ್ ಸಂಪಾದಕರು ಹಾಗೂ ಗಾಂಧೀಜಿಯವರ ಆಪ್ತರಾಗಿದ್ದ ಎಚ್.ಎಸ್.ಎಲ್ ಪೋಲಾಕ್ ಅವರು ಭಾರತಕ್ಕೆ ಭೇಟಿ ನೀಡಿ ಬೆಂಬಲವನ್ನು ಕೋರಿದ್ದರು. ಆ ಸಂದರ್ಭದಲ್ಲಿ ರಾಜಕೀಯ ಕ್ರಿಯಾಶೀಲತೆಯು ಪತ್ರಿಕೋದ್ಯಮದ ಜತೆಗೆ ಇಂಡಿಯನ್ ಓಪಿನಿಯನ್ ಮತ್ತು ಅದರ ಸಂಪಾದಕೀಯ ಬೆಸೆದುಕೊಂಡಿತ್ತು.
-ಪ್ರೊ. ಸಮರ್ ಧಲಿವಾಲ್ ಚಂಢಿಗಡ್ನ ಡಿ.ಎ.ವಿ. ಕಾಲೇಜಿನ ಉಪನ್ಯಾಸಕರು