ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ಉಗ್ರನೊಬ್ಬ ಹತನಾಗಿದ್ದಾನೆ.
ಉಗ್ರ ಅವಿತಿರುವ ಮಾಹಿತಿ ತಿಳಿದ ಭದ್ರತಾ ಪಡೆಗಳು, ಪ್ರದೇಶವನ್ನು ಸುತ್ತುವರೆದು ಗುಂಡಿನ ಮಳೆಗರೆದಿವೆ. ಈ ವೇಳೆ ಆತ ಹತನಾಗಿದ್ದಾನೆ ಎನ್ನಲಾಗಿದೆ. ಘಟನಾ ಸ್ಥಳದಲ್ಲಿದ್ದ ರೈಫಲ್ ಹಾಗೂ ಮದ್ದುಗುಂಡುಗಳನ್ನು ಸೇನೆ ವಶಕ್ಕೆ ಪಡೆದಿದೆ.
ಇದೇ ಉಗ್ರ ಕಳೆದೆರಡು ದಿನಗಳ ಹಿಂದೆ ಜನಾಪೋರ ಹಾಗೂ ಶೋಪಿಯಾನ ಭಾಗಗಳಲ್ಲಿ ಪೀಪಲ್ಸ್ ಡೆಮಾಕ್ರಟಿಕ್ ಪಕ್ಷಕ್ಕೆ ಸೇರಿದ ಇಬ್ಬರನ್ನು ಅಪಹರಿಸಿ ಗುಂಡಿನ ದಾಳಿ ನಡೆಸಿದ್ದ ಎಂದು ಮೂಲಗಳು ತಿಳಿಸಿವೆ.
ಪುಲ್ವಾಮಾ ದಾಳಿ ನಂತರವೂ ಗಡಿಯಲ್ಲಿ ಉಗ್ರರ ಉಪಟಳ ಹೆಚ್ಚುತ್ತಿದ್ದು, ಭದ್ರತಾ ಪಡೆಗಳು ತಕ್ಕ ಪ್ರತ್ಯುತ್ತರ ನೀಡುತ್ತಿವೆ. ಪುಲ್ವಾಮಾ ದಾಳಿ ಬಳಿಕ ಈವರೆಗೆ 42 ಉಗ್ರರನ್ನು ಹೊಡೆದುರುಳಿಸಲಾಗಿದೆ.