ಐಜಾಲ್/ಸಿಲ್ಚಾರ್: ಅಸ್ಸೋಂ- ಮಿಜೋರಾಂ ಗಡಿಯಲ್ಲಿ ಉಭಯ ರಾಜ್ಯಗಳ ಜನರ ನಡುವೆ ಹಿಂಸಾತ್ಮಕ ಘರ್ಷಣೆ ನಡೆದಿದ್ದು, ಹಲವಾರು ಮಂದಿ ಗಾಯಗೊಂಡಿದ್ದಾರೆ.
ಮಿಜೋರಾಂನ ಕೋಲಾಸಿಬ್ ಜಿಲ್ಲೆ ಮತ್ತು ಅಸ್ಸೋಂನ ಕ್ಯಾಚರ್ ಜಿಲ್ಲೆಯಲ್ಲಿರುವ ಪ್ರದೇಶದಲ್ಲಿ ಘರ್ಷಣೆ ನಡೆದಿದ್ದು, ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಐಜ್ವಾಲ್ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಮಿಜೋರಾಂನ ವೈರೆಂಗ್ಟೆ ಗ್ರಾಮ ಮತ್ತು ಅಸ್ಸೋಂ ಲೈಲಾಪುರದ ಸಮೀಪ ಹಿಂಸಾಚಾರ ಪೀಡಿತ ಪ್ರದೇಶಗಳಲ್ಲಿ ಭಾರತೀಯ ಮೀಸಲು ಪೊಲೀಸ್ ಸಿಬ್ಬಂದಿಯನ್ನು ಮಿಜೋರಾಂ ಸರ್ಕಾರ ನಿಯೋಜಿಸಿದೆ ಎಂದು ಹೇಳಿದ್ದಾರೆ. ಕೋಲಾಸಿಬ್ ಜಿಲ್ಲೆಯ ವೈರೆಂಗ್ಟೆ ರಾಜ್ಯದ ಉತ್ತರದ ಅಂಚಾಗಿದ್ದು, ಇದರ ಮೂಲಕ ರಾಷ್ಟ್ರೀಯ ಹೆದ್ದಾರಿ 306 ಹಾದುಹೋಗುತ್ತದೆ. ಇದು ಮಿಜೋರಾಂ ರಾಜ್ಯವನ್ನು ಅಸ್ಸೋಂ ಸಂಪರ್ಕಿಸುತ್ತದೆ.
ಘಟನೆ ಹಿನ್ನೆಲೆ:
ಶನಿವಾರ ಸಂಜೆ ಗಡಿ ಗ್ರಾಮದ ಹೊರವಲಯದಲ್ಲಿರುವ ಆಟೋರಿಕ್ಷಾ ಸ್ಟ್ಯಾಂಡ್ ಬಳಿಯ ಗುಂಪೊಂದರ ಮೇಲೆ ಅಸ್ಸೋಂನ ಕೆಲವರು ಕೋಲುಗಳು, ಕತ್ತಿ ಮತ್ತು ಕಲ್ಲುಗಳಿಂದ ದಾಳಿ ನಡೆಸಿದ್ದಾರೆ. ಇದರಿಂದ ಕೆರಳಿದ ವೈರೆಂಗ್ಟೆ ನಿವಾಸಿಗಳು ಹೆಚ್ಚಿನ ಸಂಖ್ಯೆಯಲ್ಲಿ ಒಟ್ಟುಗೂಡಿದರು ಎಂದು ಕೋಲಾಸಿಬ್ ಜಿಲ್ಲಾಧಿಕಾರಿ ಎಚ್. ಲಾಥ್ಲಾಂಗ್ಲಿಯಾನಾ ಹೇಳಿದ್ದಾರೆ.
ಘಟನೆಯಿಂದ ಕೋಪಗೊಂಡಿದ್ದ ವೈರೆಂಗ್ಟೆಯ ಜನರು, ಲೈಲಾಪುರದ ನಿವಾಸಿಗಳಿಗೆ ಸೇರಿದ ಸುಮಾರು 20 ತಾತ್ಕಾಲಿಕ ಬಿದಿರಿನ ಗುಡಿಸಲುಗಳು ಮತ್ತು ರಾಷ್ಟ್ರೀಯ ಹೆದ್ದಾರಿಯಲ್ಲಿ ನಿರ್ಮಿಸಲಾದ ಸ್ಟಾಲ್‌ಗಳಿಗೆ ಬೆಂಕಿ ಹಚ್ಚಿದ್ದಾರೆ ಎಂದು ತಿಳಿಸಿದ್ದಾರೆ.
ಹಲವಾರು ಗಂಟೆಗಳ ಕಾಲ ನಡೆದ ಹಿಂಸಾತ್ಮಕ ಘರ್ಷಣೆಯಲ್ಲಿ, ಮಿಜೋರಾಂನ ನಾಲ್ವರು ಸೇರಿದಂತೆ ಅನೇಕ ಜನರು ಗಾಯಗೊಂಡಿದ್ದಾರೆ. ಅವರನ್ನು ಕೊಲಾಸಿಬ್ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ. ಘಟನೆ ನಡೆದ ಪ್ರದೇಶದಲ್ಲಿ ಸೆಕ್ಷನ್ 144 ಜಾರಿಯಲ್ಲಿದ್ದು, ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ತಿಳಿಸಿದ್ದಾರೆ.