ಹೈದರಾಬಾದ್: ತೆಲಂಗಾಣದಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು ಕಡಿಮೆಯಾಗುತ್ತಿದ್ದು, ಇನ್ನೇನು ಕೆಲ ದಿನಗಳಲ್ಲಿ ರಾಜ್ಯವು ಕೊರೊನಾ ಮುಕ್ತವಾಗಲಿದೆ ಎಂದು ಸಿಎಂ ಕೆ ಚಂದ್ರಶೇಖರ್ ರಾವ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರ ವಿಡಿಯೋ ಸಮ್ಮೇಳನದಲ್ಲಿ ಭಾಗವಹಿಸಿದ ನಂತರ ರಾವ್ ಅವರು ಆರೋಗ್ಯ ಸಚಿವ ಇಟಾಲಾ ರಾಜೇಂದರ್ ಮತ್ತು ಇತರ ಉನ್ನತ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಸಿದರು. ಸೋಮವಾರ 159 ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ಅವುಗಳಲ್ಲಿ ಎರಡು ಮಾತ್ರ ಪಾಸಿಟಿವ್ ಪ್ರಕರಣ ಎಂದು ಅಧಿಕಾರಿಗಳು ಸಿಎಂಗೆ ಮಾಹಿತಿ ನೀಡಿದರು.
ಲಾಕ್‌ಡೌನ್ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವುದರಿಂದ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಆದಾಗ್ಯೂ, ಪ್ರಕರಣಗಳ ಸಂಖ್ಯೆ ಕಡಿಮೆಯಾದ ಹಿನ್ನೆಲೆ ಸರ್ಕಾರ ಸುಮ್ಮನೆ ಕೂರುವುದಿಲ್ಲ. ಮೊದಲೇ ಘೋಷಿಸಿದಂತೆ ಲಾಕ್‌ಡೌನ್ ಮೇ 7 ರವರೆಗೆ ಮುಂದುವರಿಯುತ್ತದೆ. ಈ ಹಿನ್ನೆಲೆ ಲಾಕ್‌ಡೌನ್ ಆದೇಶವನ್ನು ಜನರು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಮನವಿ ಮಾಡಿದರು.
ಮಂಗಳವಾರದ ವೇಳೆಗೆ ರಾಜ್ಯದ 21 ಜಿಲ್ಲೆಗಳಲ್ಲಿ ಒಂದೇ ಒಂದು ಪಾಸಿಟಿವ್ ಪ್ರಕರಣ ವರದಿಯಾಗಿಲ್ಲ. ಶೇಕಡಾ 97 ಕ್ಕೂ ಹೆಚ್ಚು ರೋಗಿಗಳು ಚೇತರಿಸಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆ ಕಂಟೈನ್ಮೆಂಟ್ ಜೋನ್ಗಳ ಸಂಖ್ಯೆ ಕೂಡ ಕ್ರಮೇಣ ಕಡಿಮೆ ಆಗುತ್ತದೆ ಎಂದು ಕೆಸಿಆರ್ ಹೇಳಿದರು.