ಹೈದರಾಬಾದ್(ತೆಲಂಗಾಣ): ಮಾರ್ಚ್‌ನಿಂದ ಅನ್ವಯಿಸುವಂತೆ ಮೂರು ತಿಂಗಳ ಕಾಲ ಬಾಡಿಗೆದಾರರಿಂದ ಬಾಡಿಗೆ ಕೇಳದಂತೆ ತೆಲಂಗಾಣ ಸರ್ಕಾರ ಮನೆಗಳ ಮಾಲೀಕರಿಗೆ ಆದೇಶಿಸಿದೆ.
ಸಂಪುಟ ಸಭೆಯ ಬಳಿಕ ಈ ಬಗ್ಗೆ ಮಾಹಿತಿ ನೀಡಿದ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್, ಮನೆ ಮಾಲೀಕರು ಬಾಡಿಗೆ ನೀಡುವಂತೆ ಬಾಡಿಗೆದಾರರಿಗೆ ಕಿರುಕುಳ ನೀಡಿದರೆ, 100ಕ್ಕೆ ಕರೆ ಮಾಡಿ ದೂರು ನೀಡಬಹುದು. ಅಲ್ಲದೆ, ಮುಂದಿನ ದಿನಗಳಲ್ಲಿ ಈ ಮೂರು ತಿಂಗಳ ಬಾಡಿಗೆಯನ್ನು ಇಎಂಐ ಪ್ರಕಾರ ಸಂಗ್ರಹಿಸುವಾಗ ಬಡ್ಡಿ ಪಡೆಯದಂತೆಯೂ ಮನೆ ಮಾಲೀಕರಿಗೆ ಸೂಚಿಸಲಾಗಿದೆ ಎಂದರು.
ಇದರ ಜೊತೆಗೆ ಸರ್ಕಾರ ಇನ್ನೂ ಕೆಲವು ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡಿದ್ದು, ಖಾಸಗಿ ಶಾಲೆಗಳು 2020-21ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಬೋಧನಾ ಶುಲ್ಕ ಹೊರತುಪಡಿಸಿ ಇನ್ಯಾವುದೇ ಹೆಚ್ಚುವರಿ ಶುಲ್ಕಗಳನ್ನು ಪಡೆಯುವಂತಿಲ್ಲ. ಬೋಧನಾ ಶುಲ್ಕವನ್ನು ಪ್ರತೀ ತಿಂಗಳು ಪಡೆಯಬೇಕು, ಮಾಸಿಕ ಅಥವಾ ತ್ರೈಮಾಸಿಕವಾಗಿ ಪಡೆಯಬಾರದು ಎಂದು ಆದೇಶ ಹೊರಡಿಸಿದ್ದಾರೆ.
ಇನ್ನು, ಉದ್ಯಮ ತೆರಿಗೆ, ಆಸ್ತಿ ತೆರಿಗೆ ಮತ್ತು ನಿಗದಿತ ವಿದ್ಯುತ್ ಶುಲ್ಕ ಸಂಗ್ರಹಿಸುವುದನ್ನು ಮೇ ಅಂತ್ಯದವರೆಗೆ ಮುಂದೂಡಲು ಸರ್ಕಾರ ನಿರ್ಧರಿಸಿದೆ. ಮುಂದೂಡಲ್ಪಟ್ಟ ಎಲ್ಲಾ ಪಾವತಿಗಳನ್ನು ಯಾವುದೇ ದಂಡ ಅಥವಾ ಬಡ್ಡಿ ಇಲ್ಲದೆ ಸಂಗ್ರಹಿಸಲಾಗುವುದು ಎಂದು ಸಿಎಂ ಕೆಸಿಆರ್ ಹೇಳಿದ್ದಾರೆ.