ಹ್ಸಿಂಚು ಕೌಂಟಿ: ಸುಮಾರು 62 ದಿನಗಳಿಂದ ಕೋಮಾದಲ್ಲಿದ್ದ ಯುವಕನೋರ್ವ ಈವರೆಗೆ ಯಾವುದೇ ಚಿಕಿತ್ಸೆಗೆ ಸ್ಪಂದಿಸಿರಲಿಲ್ಲ. ಕೊನೆಗೆ ಚಿಕನ್ ಫಿಲೆಟ್ ಹೆಸರು ಹೇಳುತ್ತಿದ್ದಂತೆ ಕಣ್ಣುಬಿಟ್ಟಿರುವ ವಿಚಿತ್ರ ಘಟನೆ ಇಲ್ಲಿನ ಟನ್ ಯೆನ್ ಜನರಲ್ ಆಸ್ಪತ್ರೆಯಲ್ಲಿ ಕಂಡು ಬಂದಿದೆ.
ತೈವಾನ್ನ ಹ್ಸಿಂಚು ಕೌಂಟಿ ನಿವಾಸಿಯಾದ 18 ವರ್ಷದ ಯುವಕ ಚಿಯು ಎರಡು ತಿಂಗಳ ಹಿಂದೆ ಸಂಭವಿಸಿದ ಬೈಕ್ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದನು. ಕೂಡಲೇ ಚಿಯುವನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಯುವಿನ ತಲೆ ಭಾಗಕ್ಕೆ ಪೆಟ್ಟು ಬಿದ್ದ ಹಿನ್ನೆಲೆ ಆತನ ನರವ್ಯೂಹಕ್ಕೆ ಹಾನಿಯಾಗಿ ಕೋಮಾ ಸ್ಥಿತಿಗೆ ತಲುಪಿದ್ದ. ಟನ್ ಯೆನ್ ಜನರಲ್ ಆಸ್ಪತ್ರೆಯಲ್ಲಿ ಚಿಯುಗೆ ಆರು ಶಸ್ತ್ರ ಚಿಕಿತ್ಸೆ ಮಾಡಿದ್ರೂ ಸಹ ಆತ ಸ್ಪಂದಿಸಿರಲಿಲ್ಲ.
ಇಂದು ಅಥವಾ ನಾಳೆ ಮಗ ಕೋಮಾದಿಂದ ಹೊರ ಬರತ್ತಾನೆ ಎಂಬ ಆಸೆ ಚಿಯು ಪೋಷಕರದ್ದಾಗಿತ್ತು. ಆತನ ಆರೈಕೆಯಲ್ಲಿ ತೊಡಗಿದ್ದ ಕುಟುಂಬಸ್ಥರು ಆತನಿಗೆ ಮತ್ತೆ ಪ್ರಜ್ಞೆ ಭರಿಸಲು ಯತ್ನಿಸುತ್ತಲೇ ಇದ್ದರು. ಈ ವೇಳೆ ಆತನ ಸಹೋದರ ಚಿಯು ಬಳಿ ಹೋಗಿ ಕಿವಿಯಲ್ಲಿ ನಿನಗೆ ಇಷ್ಟವಾದ ಚಿಕನ್ ಫಿಲೆಟ್ ತಿನ್ನಲು ಹೋಗುತ್ತಿದ್ದೇನೆ. ನೀನು ಸಹ ಬಾ ಎಂದು ಹೇಳಿದ್ದಾನೆ. ಈ ಮಾತು ಕೇಳುತ್ತಿದ್ದಂತೆ ಚಿಯು ನಾಡಿ ಬಡಿತ ಹೆಚ್ಚಾಗಿದ್ದು, ಕೆಲ ಕ್ಷಣಗಳ ಬಳಿಕ ಪ್ರಜ್ಞೆ ಬಂದಿದೆ.
62 ದಿನಗಳಿಂದ ವಿವಿಧ ಚಿಕಿತ್ಸೆ ನೀಡಿದರೂ ಸಹ ಸ್ಪಂದಿಸದ ಚಿಯು ಚಿಕನ್ ಹೆಸರು ಕೇಳುತ್ತಿದ್ದಂತೆ ಪ್ರಜ್ಞೆ ಪಡೆದಿರುವುದು ವೈದ್ಯರಿಗೂ ಆಶ್ಚರ್ಯವುಂಟು ಮಾಡಿದೆ.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಚಿಯು ಗುಣಮುಖನಾಗುತ್ತಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.