ನವದೆಹಲಿ: ಆಡಿಯೋ ಸಂದೇಶವೊಂದನ್ನು ಬಿಡುಗಡೆ ಮಾಡಿರುವ ತಬ್ಲಿಘಿ ಜಮಾತ್ ಮುಖ್ಯಸ್ಥ, ಮರ್ಕಜ್ ಕಾರ್ಯಕ್ರಮದ ಆರೋಪಿ ಮೌಲಾನಾ ಸಾದ್ ಕಂಧಲ್ವಿ, ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಸರ್ಕಾರಕ್ಕೆ ಸಹಕರಿಸುವಂತೆ ಜನರಲ್ಲಿ ಮನವಿ ಮಾಡಿದ್ದಾರೆ.
ಅಪಾಯಕಾರಿ ಕೋವಿಡ್ ರೋಗವನ್ನ ನಾಶಮಾಡುವುದು, ಅಗತ್ಯವಿರುವ ಜನರಿಗೆ ಸಹಾಯ, ಒಬ್ಬರಿಗೊಬ್ಬರು ನೆರವಾಗುವುದು ಬಹಳ ಮುಖ್ಯ ಎಂದು ಆಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ.
ಭಾರತದಲ್ಲಿ ತ್ವರಿತವಾಗಿ ಕೊರೊನಾ ಸೋಂಕು ಹರಡಲು ದೆಹಲಿಯ ನಿಜಾಮುದ್ದೀನ್ನ ಮರ್ಕಜ್ನಲ್ಲಿ ದೊಡ್ಡ ಮಟ್ಟದಲ್ಲಿ ಆಯೋಜಿಸಿದ್ದ ತಬ್ಲಿಘಿ ಜಮಾತ್ ಕೂಟ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಸಾಂಕ್ರಾಮಿಕ ರೋಗ ಕಾಯ್ದೆಯ ನಿಬಂಧನೆಗಳನ್ನು ಉಲ್ಲಂಘಿಸಿದ ಆರೋಪ ಹಾಗೂ ಐಪಿಸಿ ಸೆಕ್ಷನ್ 120 ಬಿ (ಅಪರಾಧಿ ಕೃತ್ಯಕ್ಕೆ ಪಿತೂರಿ) ಅಡಿ ತಬ್ಲಿಘಿ ಜಮಾತ್ ಮರ್ಕಜ್ ವಿರುದ್ಧ ಈಗಾಗಲೇ ಪ್ರಕರಣ ದಾಖಲಾಗಿದೆ.
ಇನ್ನು, ಕೂಟವನ್ನು ಆಯೋಜಿಸಿದ್ದ ತಬ್ಲಿಘಿ ಜಮಾತ್ ಮುಖ್ಯಸ್ಥ ಮೌಲಾನಾ ಸಾದ್ ಕಂಧಲ್ವಿ ವಿರುದ್ಧ ಪ್ರಕರಣ ದಾಖಲಾಗಿದೆ. ಅಪರಾಧ ವಿಭಾಗ ಹಾಗೂ ಜಾರಿ ನಿರ್ದೇಶನಾಲಯವು ನಾಪತ್ತೆಯಾಗಿರುವ ಸಾದ್‌ನನ್ನು ಹುಡುಕುತ್ತಿದೆ. ಅಲ್ಲದೇ ಈಗಾಗಲೇ ಸಾದ್‌ಗೆ ನೋಟಿಸ್ ಕೂಡ ನೀಡಿದೆ.