ಬುಲಂದ್‌ಶಹರ್ : ವಿದ್ಯಾರ್ಥಿನಿ ಸುದೀಕ್ಷಾ ಸಾವಿನ ಪ್ರಕರಣದ ತನಿಖೆ ನಡೆಸುತ್ತಿರುವ ಬುಲಂದ್‌ಶಹರ್ ಎಸ್‌ಎಸ್‌ಪಿ ಸಂತೋಷ್ ಕುಮಾರ್ ಸಿಂಗ್, ಬುಲೆಟ್ ಸವಾರರ ವಿಳಾಸ ತಿಳಿಸುವವರಿಗೆ 20 ಸಾವಿರ ರೂ. ಬಹುಮಾನ ಘೋಷಿಸಿದ್ದಾರೆ.
ವಿದ್ಯಾರ್ಥಿನಿ ಹತ್ಯೆ ಪ್ರಕರಣ ಸಂಬಂಧ ಬುಲೆಟ್ ಬೈಕ್ ಪತ್ತೆಯಲ್ಲಿ ತೊಡಗಿರುವ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಶಂಕಿತರ ಬುಲೆಟ್ ಸವಾರರ ಬಗ್ಗೆ ಮಾಹಿತಿ ನೀಡುವವರಿಗೆ 20 ಸಾವಿರ ರೂ ಬಹುಮಾನ ಘೋಷಿಸಿದೆ. ಅಲ್ಲದೇ ಮಾಹಿತಿದಾರರ ಹೆಸರು ಗೌಪ್ಯವಾಗಿಡುವ ಭರವಸೆ ನೀಡಿದ್ದಾರೆ.
ಪ್ರತ್ಯೇಕವಾಗಿ ತನಿಖೆ ನಡೆಸುತ್ತಿರುವಾಗ ಐದು ಪೊಲೀಸರ ತಂಡಗಳು ಬುಲೆಟ್ ಸವಾರರ ಪತ್ತೆಯಲ್ಲಿ ತೊಡಗಿವೆ. ಈವರೆಗೆ ಅನೇಕ ಬುಲೆಟ್ ಸವಾರರನ್ನು ಪತ್ತೆ ಮಾಡಲಾಗಿದ್ದು, ಪ್ರತ್ಯೇಕವಾಗಿ ವಿಚಾರಣೆ ನಡೆಸಲಾಗುತ್ತಿದೆ.
ಘಟನೆ ಹಿನ್ನೆಲೆ: ಗೌತಮ್ ಬುದ್ಧನಗರ ಜಿಲ್ಲೆಯ ಜಿತೇಂದ್ರ ಭಾತಿಯ ಅವರ ಪುತ್ರಿ ಸುದೀಕ್ಷಾ ತನ್ನ ಸಹೋದರ ನಿಗಮ್ ಭಾತಿ ಅವರೊಂದಿಗೆ ಸೋಮವಾರ ಔರಂಗಾಬಾದ್ ಪ್ರದೇಶದಲ್ಲಿ ವಾಸಿಸುತ್ತಿದ್ದ ತಮ್ಮ ಸಂಬಂಧಿಕರ ಮನೆಗೆ ತೆರಳುತ್ತಿದ್ದರು. ಈ ವೇಳೆ ಬುಲೆಟ್ ಬೈಕ್ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಯುವತಿಯ ಬಗ್ಗೆ ಕಮೆಂಟ್ ಮಾಡಿದ್ದಾರೆ. ಯುವತಿ ಹೋಗುತಿದ್ದ ಬೈಕ್ ಓವರ್ಟೆಕ್ ಮಾಡಿ ಬ್ರೇಕ್ ಹಾಕಿದ್ದಾರೆ. ಈ ವೇಳೆ ಬೈಕ್ಗಳ ನಡುವೆ ಅಪಘಾತ ಸಂಭವಿಸಿ ಯುವತಿ ಸ್ಥಳದಲ್ಲೇ ಸಾವಿಗೀಡಾಗಿದ್ದಳು.
2018ರಲ್ಲಿ 12ನೇ ತರಗತಿಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದ ಯುವತಿ ವಿದ್ಯಾರ್ಥಿ ವೇತನ ಪಡೆದು ಅಮೆರಿಕದ ಪ್ರತಿಷ್ಠಿತ ವಿಶ್ವವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಳು.