ಜಲ್ನಾ (ಮಹಾರಾಷ್ಟ್ರ): ಕೊರೊನಾ ವೈರಸ್ ಪರಿಣಾಮವಾಗಿ ವಿಧಿಸಲಾದ ಲಾಕ್ಡೌನ್ನಿಂದಾಗಿ ಇತರ ರಾಜ್ಯಗಳಿಗೆ ಸೇರಿದ ಅನೇಕ ಜನರು ಮಹಾರಾಷ್ಟ್ರದಲ್ಲಿ ಸಿಲುಕಿಕೊಂಡಿದ್ದಾರೆ.
ಇವರಲ್ಲಿ ಕೆಲವರು ತಮ್ಮ ಊರಿಗೆ ಹಿಂತಿರುಗಲು ಸಾಧ್ಯವಾಗದ ಕಾರಣ ಹಾಗೂ ಸಾರಿಗೆ ಸೌಲಭ್ಯವಿಲ್ಲದ್ದರಿಂದ ಹತಾಶೆಯಿಂದ ತಮ್ಮ ತವರಿಗೆ ಸಾವಿರಾರು ಕಿಲೋಮೀಟರ್ ನಡೆದು ಹೋಗುತ್ತಿದ್ದಾರೆ.
ಅದೇ ಹತಾಶೆಯಿಂದ, ಮಹಾರಾಷ್ಟ್ರದ ಜಲ್ನಾದಲ್ಲಿ ಸಿಕ್ಕಿಬಿದ್ದ ಮೂವರು ಯುವಕರು ಉತ್ತರ ಪ್ರದೇಶದ ಉನ್ನಾವೊಗೆ ತೆರಳುವ ಉದ್ದೇಶದಿಂದ ಹೊಸ ಸೈಕಲ್‌ಗಳನ್ನು ಖರೀದಿಸಿ ಅದರಲ್ಲಿ ತೆರಳಲು ನಿರ್ಧರಿಸಿದ್ದರು.
ಈ ಯುವಕರು ತಮ್ಮ ರಾಜ್ಯಕ್ಕೆ ಮರಳಲು 4,000 ರೂಪಾಯಿ ಮೌಲ್ಯದ ಸೈಕಲ್‌ಗಳನ್ನು ಖರೀದಿಸಿದ್ದರು. ಆದರೆ, ಅವರು ಸೈಕಲ್ ಮೂಲಕ ತೆರಳುವ ಸಂದರ್ಭದಲ್ಲಿ ಉತ್ತರ ಪ್ರದೇಶಕ್ಕೆ ರೈಲೊಂದು ವಲಸೆ ಕಾರ್ಮಿಕರನ್ನು ಹೊತ್ತು ಹೊರಡಲಿದೆ ಎಂದು ತಿಳಿದುಬಂದಿದೆ.
ಈ ವಿಷಯ ತಿಳಿದ ಯುವಕರು, ಜಲ್ನಾ ರೈಲು ನಿಲ್ದಾಣವನ್ನು ತಲುಪಿ ರೈಲಿನಲ್ಲೇ ಸೈಕಲ್ ಸಾಗಿಸಲು ಮುಂದಾಗಿದ್ದಾರೆ. ಆದರೆ ರೈಲ್ವೆಯ ನಿಯಮಗಳ ಪ್ರಕಾರ, ಸೈಕಲ್‌ಗಳನ್ನು ರೈಲಿನಲ್ಲಿ ಸಾಗಿಸಲು ಅನುಮತಿಸಲಾಗಲಿಲ್ಲ.
ಹೊಸದಾಗಿ ಖರೀದಿಸಿದ ಸೈಕಲ್‌ಗಳನ್ನು ಬಿಟ್ಟು ಹೋಗಲು ಮನಸ್ಸಿಲ್ಲದ ಕಾರಣ ರೈಲ್ವೆ ಅಧಿಕಾರಿಗಳಿಗೆ ಈ ಯುವಕರು ಸೈಕಲ್ ತೆಗೆದುಕೊಂಡು ಹೋಗಲು ವಿನಂಬ್ರಿಸಿದ್ದಾರೆ. ಆದರೆ ಅಧಿಕಾರಿಗಳು ಇದಕ್ಕೆ ಒಪ್ಪಿಗೆ ನೀಡದೆ, ಸೈಕಲ್ ಬಿಡಿ ಭಾಗಗಳನ್ನು ಬೇಕಾದರೆ ಕೊಂಡೊಯ್ಯೊಲು ಅನುಮತಿ ನೀಡುವುದಾಗಿ ತಿಳಿಸಿದ್ದರು.
ಈ ಹಿನ್ನೆಲೆ ಈ ಮೂರು ಜನ ಯುವಕರು ತಮ್ಮ ಸೈಕಲ್‌ಗಳನ್ನು ಬಿಚ್ಚಿ, ಬಿಡಿ ಭಾಗಗಳನ್ನಾಗಿ ಮಾಡಿ ಚೀಲದಲ್ಲಿ ತುಂಬಿಕೊಂಡು ಊರಿಗೆ ತೆರಳಿದ್ದಾರೆ.