ಉನಾ ( ಹಿಮಾಚಲ ಪ್ರದೇಶ ) : ಕಳೆದ ಮೂರು ತಿಂಗಳಿನಿಂದ ಕೆಲಸವಿಲ್ಲದೇ ಕುವೈತ್‌ನಲ್ಲಿ ಸಿಲುಕಿರುವ ಹಿಮಾಚಲ ಪ್ರದೇಶದ ಉನಾ ಜಿಲ್ಲೆಯ ಇಂಜಿನಿಯರ್ ರಿಷಬ್ ಶರ್ಮಾ ಭಾರತಕ್ಕೆ ಮರಳಲು ಸಹಾಯ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಮನವಿ ಮಾಡಿದ್ದಾರೆ.
ಪೂರ್ವ ನಿಗದಿಯಂತೆ ಏಪ್ರಿಲ್ 6 ರಂದು ರಿಷಬ್ ಶರ್ಮಾ ತಾಯ್ನಾಡಿಗೆ ಹಿಂದಿರುಗಬೇಕಿತ್ತು. ಆದರೆ, ಕೊರೊನಾ ವೈರಸ್ ನಿಯಂತ್ರಿಸಲು ಮಾರ್ಚ್ 25 ರಿಂದ ರಾಷ್ಟ್ರವ್ಯಾಪಿ ಲಾಕ್ಡೌನ್ ಜಾರಿಯಾದ ಹಿನ್ನೆಲೆ ಎಲ್ಲ ಅಂತಾರಾಷ್ಟ್ರೀಯ ವಿಮಾನಗಳು ರದ್ದಾದವು. ಹೀಗಾಗಿ ಊರಿಗೆ ಹಿಂದಿರುಗಲಾಗದೇ ಅವರು ಅಲ್ಲೇ ಸಿಲುಕಿಕೊಂಡಿದ್ದಾರೆ.
ವಿಡಿಯೋ ಮೂಲಕ ಮಾತನಾಡಿರುವ ರಿಷಬ್ ಶರ್ಮಾ ತನ್ನ ಅಸಹಾಯಕತೆ ತೋಡಿಕೊಂಡಿದ್ದು, ಊರಿಗೆ ಹಿಂದಿರುಗಲು ಸಹಾಯ ಮಾಡುವಂತೆ ರಾಜ್ಯ ಹಾಗೂ ಕೇಂದ್ರ ಸರ್ಕಾರವನ್ನು ವಿನಂತಿಸಿಕೊಂಡಿದ್ದಾರೆ. ಅಲ್ಲದೇ, ಊರಿಗೆ ಮರಳಲು ತ್ವರಿತ ಕ್ರಮ ಕೈಗೊಳ್ಳುವಂತೆ ಪೋಷಕರಿಗೂ ಒತ್ತಾಯಿಸಿದ್ದಾರೆ.
ನನ್ನ ಹೆಂಡತಿಯ ಸ್ಥಿತಿ ಹದಗೆಡುತ್ತಿದೆ, ಅವಳು ಖಿನ್ನತೆಯಿಂದ ಬಳಲುತ್ತಿರುವುದರಿಂದ ನನ್ನ ಮಗ ಸಾಧ್ಯವಾದಷ್ಟು ಬೇಗ ಭಾರತಕ್ಕೆ ಮರಳಲು ಸಹಾಯ ಮಾಡುವಂತೆ ನಾವು ಪ್ರಧಾನಿ ನರೇಂದ್ರ ಮೋದಿ ಮತ್ತು ನಾಗರಿಕ ವಿಮಾನಯಾನ ಸಚಿವರಿಗೆ ವಿನಂತಿಸುತ್ತೇವೆ ಎಂದು ರಿಷಬ್ ತಂದೆ ಹೇಳಿದ್ದಾರೆ.