ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ಭದ್ರತಾ ಪಡೆ ಹಾಗೂ ಉಗ್ರರ ನಡುವೆ ಗುಂಡಿನ ಚಕಮಕಿ ನಡೆದು, ಓರ್ವ ಯೋಧ ಹುತಾತ್ಮರಾಗಿದ್ದಾರೆ. ಈ ವೇಳೆ, ಇಬ್ಬರು ಉಗ್ರರನ್ನು ಹೊಡೆದುರುಳಿಸುವಲ್ಲಿ ಸೇನೆ ಯಶಸ್ವಿಯಾಗಿದೆ.
ಬಿಜ್ ಬಿಹಾರ ನಗರದ ಮರ್ಹಾಮ ಸಂಗಮ್ ಗ್ರಾಮದಲ್ಲಿ ಇಂದು ಬೆಳಗ್ಗೆಯಿಂದ ಗುಂಡಿನ ಕಾಳಗ ನಡೆಯುತ್ತಿದೆ. ಜೈಷೆ ಮೊಹಮ್ಮದ್ ಉಗ್ರ ಸಂಘಟನೆಗೆ ಸೇರಿ ಇಬ್ಬರು ಉಗ್ರರನ್ನು ಬಲಿ ಹಾಕಲಾಗಿದೆ. ಈ ವೇಳೆ, ಓರ್ವ ಯೋಧ ಹುತಾತ್ಮರಾಗಿದ್ದು, ಮತ್ತೊಬ್ಬ ಯೋಧ ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
33ನೇ ರಾಷ್ಟ್ರೀಯ ರೈಫಲ್ಸ್, ಜಮ್ಮು ಮತ್ತು ಕಾಶ್ಮೀರದ ಪೊಲೀಸರು ಹಾಗೂ ಕೇಂದ್ರ ಮೀಸಲು ಪೊಲೀಸ್ ಪಡೆ ಜಂಟಿ ಕಾರ್ಯಾಚರಣೆ ಕೈಗೊಂಡಿದೆ. ಸದ್ಯ ಕಾರ್ಯಾಚರಣೆ ಮುಂದುವರೆದಿದೆ.
ನಿನ್ನೆ ಅನಂತನಾಗ್ ಜಿಲ್ಲೆಯ ಅಚಬಾಲ್ನ ಬದೂರ ಏರಿಯಾದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸೇನೆಯ ಮೇಜರ್ವೊಬ್ಬರು ಹುತಾತ್ಮರಾಗಿದ್ದರು. ಮತ್ತಿಬ್ಬರು ಯೋಧರು ಗಂಭೀರವಾಗಿ ಗಾಯಗೊಂಡಿದ್ದರು. ಓರ್ವ ಉಗ್ರನನ್ನೂ ಹೊಡೆದುರುಳಿಸಲಾಗಿತ್ತು.