ನವದೆಹಲಿ : ಏನ್ ಕರೆಂಟ್ ಬಿಲ್‌ರೀ, ಒಮ್ಮೊಮ್ಮೆ ಸರ್‌ರ್ ಅಂತಾ ಏರಿಕೆ ಕಂಡಿರುತ್ತೆ ಅಂತಿರ್ತೀವಿ. ಅದು ಸುಳ್ಳೇನಲ್ಲ. ಇದರಿಂದ ಮುಕ್ತಿ ಹೊಂದೋದಕ್ಕೆ ದೆಹಲಿ ಸರ್ಕಾರ ಒಂದ್ ಐಡಿಯಾ ಮಾಡಿದೆ. ಪ್ರತಿ ಸ್ಕೂಲ್‌ಗೆ ತಿಂಗಳು 35 ಸಾವಿರಕ್ಕೂ ಹೆಚ್ಚು ಕರೆಂಟ್ ಬಿಲ್ ಬರ್ತಾ ಇತ್ತಂತೆ. ಆದರೆ, ಈಗ 35 ಪೈಸೆನೂ ಕರೆಂಟ್ ಬಿಲ್ ಕಟ್ಟೋದಿಲ್ಲ. ಅದಕ್ಕಾಗಿ ಅವರು ಸೂರ್ಯನಿಗೆ ಮೊರೆ ಹೋಗಿದ್ದಾರೆ.

ದೆಹಲಿಯ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಪ್ ಸರ್ಕಾರ ಶೈಕ್ಷಣಿಕ ವಲಯದ ಸುಧಾರಣೆಗೆ ಅವಿರತವಾಗಿ ಶ್ರಮಿಸುತ್ತಿದೆ. ಸರ್ಕಾರಿ ಶಾಲೆಗಳಿಗೆ ಅತ್ಯಾಧುನಿಕ ಮೂಲಸೌಕರ್ಯ ಕಲ್ಪಿಸಿ, ಒಳ್ಳೆಯ ಉದಾಹರಣೆಯಾಗಿದೆ. ಈಗ ಸರ್ಕಾರಿ ಶಾಲೆಗಳ ಮೇಲೆ ಸೋಲಾರ್ ಪ್ಯಾನಲ್ ಅಳವಡಿಸಿ ಕರೆಂಟ್‌ನಿಂದಾಗ್ತಿದ್ದ ಅಧಿಕ ವೆಚ್ಚಕ್ಕೂ ಕಡಿವಾಣ ಹಾಕಲಾಗ್ತಿದೆ. ಮೊದಲಾದ್ರೆ ಒಂದೊಂದು ಶಾಲೆಗೆ ಪ್ರತಿ ತಿಂಗಳು 35 ಸಾವಿರ ರೂ. ಕರೆಂಟ್ ಬಿಲ್ ಬರುತ್ತಿತ್ತು. ಈಗ ಸೋಲಾರ್ ಅಳವಡಿಸಿದ ಮೇಲೆ ನಯಾಪೈಸೆನೂ ಕರೆಂಟ್ ಬಿಲ್ ಕಟ್ಟಬೇಕಿಲ್ಲ.

ಈಗಾಗಲೇ ಮೊದಲ ಹಂತದಲ್ಲಿ 21 ಶಾಲೆಗಳಲ್ಲಿ ಸೋಲಾರ್ ವ್ಯವಸ್ಥೆ ಅಳವಡಿಸಿದ್ದೇವೆ. 100 ಶಾಲೆಗಳಲ್ಲಿ ಸೋಲಾರ್ ಅಳವಡಿಕೆ ಕಾಮಗಾರಿ ನಡೆಯುತ್ತಿವೆ. ಒಟ್ಟು 500 ಸರ್ಕಾರಿ ಶಾಲೆಗಳಿಗೆ ಸೋಲಾರ್ ಅಳವಡಿಸುವ ಗುರಿ ಆಪ್ ಸರ್ಕಾರ ಹೊಂದಿದೆ. ವಿದ್ಯುತ್ ಸ್ವಾವಲಂಬನೆ ಗಳಿಸುವ ನಿಟ್ಟಿನಲ್ಲಿ ನಾವು ಮಹತ್ತರ ಹೆಜ್ಜೆ ಇರಿಸಿದ್ದೇವೆ ಅಂತಾ ತಮ್ಮ ಅಧಿಕೃತ ಟ್ವಿಟರ್‌ನಲ್ಲಿ ದೆಹಲಿ ಶಿಕ್ಷಣ ಸಚಿವ ಮನೀಶ್ ಸಿಸೋಡಿಯಾ ಬರೆದುಕೊಂಡಿದ್ದಾರೆ.
ಇದಷ್ಟೇ ಅಲ್ಲ, ಅಂದ್ಕೊಂಡಿದ್ದಕ್ಕಿಂತಲೂ ಈಗಾಗಲೇ 25 ಸಾವಿರ ಕಲಾತ್ಮಕ ಕೊಠಡಿಗಳನ್ನ ನಿರ್ಮಿಸಲಾಗಿದೆ. 2018ರಿಂದ ಸಿಬಿಎಸ್‌ಸಿ ಪಠ್ಯಕ್ರಮವಿರುವ ಎಲ್ಲ ಸರ್ಕಾರಿ ಶಾಲೆಗಳು ಗಣನೀಯವಾಗಿ ಅಭಿವೃದ್ಧಿ ಹೊಂದಿವೆ. ಈ ಸಾರಿ ಶೇ. 90.68 ಫಲಿತಾಂಶ ಹೊರ ಬಂದಿದೆ. ಕಳೆದೊಂದು ದಶಕದಲ್ಲೇ ಅತೀ ಹೆಚ್ಚು ಶೇಕಡಾವಾರು ಫಲಿತಾಂಶ ದಾಖಲಾಗಿದೆ.
ಕಾನ್ಫಿಡೆನ್ಸ್ ತುಂಬಲು ಮಕ್ಕಳಿಗೆ ಸ್ಪೋಕನ್ ಇಂಗ್ಲೀಷ್

ಸ್ಪರ್ಧಾತ್ಮಕ ಜಗತ್ತಿನಲ್ಲಿ ಇಂಗ್ಲಿಷ್ ಕಲಿಕೆ ಅನಿವಾರ್ಯ ಎಂಬ ಸ್ಥಿತಿಯಿದೆ. ಎಲ್ಲ ಜ್ಞಾನವಿದ್ದೂ ಇಂಗ್ಲಿಷ್ ಸಂವಹನ ಕೌಶಲ್ಯವಿಲ್ಲದಿದ್ರೇ ಎಷ್ಟೋ ವೇಳೆ ಒಳ್ಳೊಳ್ಳೆ ಅವಕಾಶಗಳು ಕೈ ತಪ್ಪುತ್ತವೆ. ಅದಕ್ಕಾಗಿ ಮಕ್ಕಳಿಗೆ ಸ್ಪೋಕನ್ ಇಂಗ್ಲಿಷ್ ತರಬೇತಿಯನ್ನೂ ಕೂಡ ದೆಹಲಿ ಸರ್ಕಾರ ಶಾಲಾ ಮಕ್ಕಳಿಗೆ ನೀಡುತ್ತಿದೆ.
