ನವದೆಹಲಿ : ಲಾಕ್ ಡೌನ್ ಅವಧಿಯಲ್ಲಿ ಮಹಿಳೆಯರ ಮೇಲಿನ ಕೌಟುಂಬಿಕ ದೌರ್ಜನ್ಯ ಪ್ರಕರಣಗಳು ಹೆಚ್ಚಳವಾಗಿದೆ ಎಂಬ ಆರೋಪವನ್ನು ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಸ್ಮೃತಿ ಇರಾನಿ ನಿರಾಕರಿಸಿದ್ದಾರೆ.
ಲಾಕ್ ಡೌನ್ ಅವಧಿಯಲ್ಲಿ ಕೌಟುಂಬಿಕ ಹಿಂಸಾಚಾರ ಹೆಚ್ಚಿದೆ ಮಹಿಳೆಯರಿಗೆ ದೂರು ನೀಡಲು ಕೂಡ ಸಾಧ್ಯವಾಗುತ್ತಿಲ್ಲ ಎಂಬ ಆರೋಪವನ್ನು ನಿರಾಕರಿಸಿದ ಅವರು, ಇದು ಸುಳ್ಳು, ಎಲ್ಲಾ ರಾಜ್ಯಗಳ ಪ್ರತೀ ಜಿಲ್ಲಾ ಕೇಂದ್ರಗಳಲ್ಲೂ ಒಂದು ಪುನರ್ವಸತಿ ಕೇಂದ್ರಗಳಿವೆ. ಪೊಲೀಸರ ಮಾರ್ಗದರ್ಶನದಲ್ಲಿ ಆ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ ಎಂದು ಹೇಳಿದ್ದಾರೆ.
ಭಾನುವಾರ ರಾತ್ರಿ ವರ್ಚುವಲ್ ಪ್ಲಾಟ್‌ಫಾರ್ಮ್ ಮೂಲಕ ಆಯೋಜಿಸಿದ್ದ ಟೈ ಟಾಕ್ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಸಚಿವೆ ಇರಾನಿ, ಭಾರತದ ಎಲ್ಲ ಪುರುಷರು ಮನೆಯಲ್ಲಿ ಮಹಿಳೆಯರ ಮೇಲೆ ದೌರ್ಜನ್ಯವೆಸಗುತ್ತಿಲ್ಲ. ಲಾಕ್ ಡೌನ್ ಅವಧಿಯಲ್ಲಿ ನಮ್ಮ ಪೊಲೀಸ್ ಇಲಾಖೆ ಹಾಗೂ ಪುನರ್ವಸತಿ ಕೇಂದ್ರಗಳು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಿವೆ ಎಂದಿದ್ದಾರೆ.
ಕೇಂದ್ರ ಸರ್ಕಾರದ ಹೊರತಾಗಿಯೂ ನಮ್ಮ ವಿವಿಧ ರಾಜ್ಯಗಳಲ್ಲಿ 35ಕ್ಕೂ ಅಧಿಕ ಸಹಾಯವಾಣಿಗಳಿವೆ. ಇದರ ಮೂಲಕ ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆದು ಅವರನ್ನು ರಕ್ಷಣೆ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.