ನವದೆಹಲಿ: ಕಳೆದ ರಾತ್ರಿ ರಾಷ್ಟ್ರ ರಾಜಧಾನಿಯ ಆಗ್ನೇಯ ಭಾಗದ ಜನವಸತಿ ಕಟ್ಟಡವೊಂದರಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದ್ದು, 6 ಮಂದಿ ಸಜೀವ ದಹನವಾಗಿದ್ದಾರೆ. ಅಲ್ಲದೆ ಘಟನೆಯಲ್ಲಿ 11 ಜನ ಗಾಯಗೊಂಡಿದ್ದಾರೆ.
ಜಾಮಿಯಾ ಮಿಲ್ಲಿಯ ಇಸ್ಲಾಮಿಯಾ ವಿವಿ ಸಮೀಪದ ಜನನಿಬಿಡ ಜಾಕೀರ್ ನಗರದಲ್ಲಿನ ನಾಲ್ಕು ಅಂತಸ್ತಿನ ಕಟ್ಟಡದಲ್ಲಿ ರಾತ್ರಿ 2 ಗಂಟೆಗೆ ಬೆಂಕಿ ಕಾಣಿಸಿಕೊಂಡಿದೆ. ಜನ ಗಾಢ ನಿದ್ರೆಯಲ್ಲಿರುವಾಗಲೇ ಎಲೆಕ್ಟ್ರಿಸಿಟಿ ಬಾಕ್ಸ್ವೊಂದರಲ್ಲಿ ಬೆಂಕಿ ಕಾಣಿಸಿಕೊಂಡು ಕಟ್ಟಡಕ್ಕೆ ಆವರಿಸಿದೆ ಎನ್ನಲಾಗಿದೆ. ಘಟನೆ ನಡೆದಾಗ ಕಟ್ಟಡದ ಮೇಲಿಂದ ಜಿಗಿದು ಕೆಲವರು ತಮ್ಮ ಪ್ರಾಣ ರಕ್ಷಿಸಿಕೊಂಡಿದ್ದಾರೆ.
ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಪರಿಣಾಮ 7 ಕಾರು ಹಾಗೂ 8 ಬೈಕ್ಗಳು ಜಖಂಗೊಂಡಿವೆ. ಅಗ್ನಿಶಾಮಕ ದಳದ 8 ವಾಹನಗಳು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿವೆ.