ಕೊಯಿಮತ್ತೂರು(ತಮಿಳುನಾಡು): 16 ವರ್ಷದ ಬಾಲಕಿಗೆ ಲವ್ ಲೆಟರ್ ಕೊಟ್ಟು ಸಿಕ್ಕಿಹಾಕಿಕೊಂಡಿರುವ 66 ವರ್ಷದ ವೃದ್ಧನೋರ್ವನ ಮೇಲೆ ಇದೀಗ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲು ಮಾಡಿಕೊಂಡಿದ್ದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಪೊಡನೂರ್ನ 66 ವರ್ಷದ ಮೊಹಮ್ಮದ್ ಬಶೀರ್ ಸಿಕ್ಕಿಹಾಕಿಕೊಂಡಿರುವ ವ್ಯಕ್ತಿ. ಪಕ್ಕದ ಮನೆಯಲ್ಲಿ ವಾಸವಾಗಿದ್ದ 16 ವರ್ಷದ ಬಾಲಕಿಗೆ ಕಳೆದ ಎರಡು ದಿನಗಳ ಹಿಂದೆ ಈತ ಲವ್ ಲೆಟರ್ ನೀಡಿದ್ದನು. ಜತೆಗೆ ಅದರಲ್ಲಿ 'ನಾನು ನಿನ್ನ ಇಷ್ಟಪಟ್ಟಿದ್ದೇನೆ. ನಿನಗೆ ಓಕೆ ನಾ' ಎಂದು ಬರೆದಿದ್ದನು ಎಂದು ತಿಳಿದು ಬಂದಿದೆ.
ಈ ಲೆಟರ್ ನೋಡಿರುವ ಬಾಲಕಿ ಆತಂಕಕ್ಕೊಳಗಾಗಿದ್ದು, ಆಕೆಯ ತಾಯಿ ಕೈಗೆ ನೀಡಿದ್ದಾಳೆ. ಈ ವೇಳೆ ವೃದ್ಧನಿಗೆ ವಾರ್ನ್ ಮಾಡಿ ಈ ರೀತಿಯಾಗಿ ನಡೆದುಕೊಳ್ಳದಂತೆ ಸೂಚನೆ ನೀಡಿದ್ದಾರೆ.
ಇದಾದ ಬಳಿಕ ಬುದ್ಧಿ ಕಲಿಯದ ವೃದ್ದ ಬಾಲಕಿಗೆ ತನ್ನ ಪ್ರೀತಿಯ ಬಗ್ಗೆ ಹೇಳಿಕೊಂಡಿದ್ದು, ಆಕೆಯನ್ನ ಬೆದರಿಸಿದ್ದಾನೆ. ಇದರಿಂದ ಬಾಲಕಿ ಮನೆ ಬಿಟ್ಟು ಹೊರಗಡೆ ಬರಲು ಹಿಂದೇಟು ಹಾಕಿದ್ದಾಳೆ. ತಕ್ಷಣವೇ ಪೋಷಕರು ರಾಮನಾಥಪುರಂ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ಆತನ ಬಂಧನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.