ನವದೆಹಲಿ: ನಿಷೇಧಿಸಲ್ಪಡದ ಆಯ್ದ ಪ್ರದೇಶಗಳಲ್ಲಿ ಏಪ್ರಿಲ್ 20 ರಿಂದ ಕೆಲ ವಿನಾಯಿತಿಗಳನ್ನು ನೀಡಲಾಗಿದೆ. ಆದರೆ ಕೋವಿಡ್19 ಹಾಟ್‌ಸ್ಪಾಟ್‌ಗಳಲ್ಲಿ ಕಠಿಣ ನಿರ್ಬಂಧಗಳು ಮುಂದುವರೆಸಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ. ದೆಹಲಿಯಲ್ಲಿಂದು ಕೋವಿಡ್19 ಕುರಿತ ಪ್ರತಿನಿತ್ಯದ ಸುದ್ದಿಗೋಷ್ಠಿ ನಡೆಸಿದ ಕೇಂದ್ರ ಆರೋಗ್ಯ ಮತ್ತು ಕುಟುಂಬ ಇಲಾಖೆಯ ಜಂಟಿ ಕಾರ್ಯದರ್ಶಿ ಲಾವ್ ಅಗರ್‌ವಾಲ್, ಜನರ ಜೀವನ ಮಟ್ಟ ಸುಧಾರಣೆಗಾಗಿ ಕೃಷಿ ಮತ್ತು ಗ್ರಾಮೀಣ ಭಾಗದ ಕೆಲ ಆರ್ಥಿಕ ವಲಯಗಳಿಗೆ ಅನುಮತಿ ನೀಡಲಾಗಿದೆ ಎಂದು ಹೇಳಿದರು.
ಕೊರೊನಾ ವೈರಸ್‌ಗೆ ವೈಜ್ಞಾನಿಕ ವ್ಯಾಕ್ಸಿನ್ ಸಂಶೋಧನೆ ಮತ್ತು ಡ್ರಗ್ ಪರೀಕ್ಷೆ ಮಾಡುವ ನಿಟ್ಟಿನಲ್ಲಿ ಉನ್ನತ ಮಟ್ಟದ ಟಾಸ್ಕ್ ಫೋರ್ಸ್ ರಚಿಸಲಾಗಿದೆ. ನೀತಿ ಆಯೋಗದ ಸದಸ್ಯರು, ಸರ್ಕಾರಕ್ಕೆ ವೈಜ್ಞಾನಿಕ ಮುಖ್ಯ ಸಲಹೆಗಾರರಾಗಿರುವವರು ಈ ತಂಡದಲ್ಲಿದ್ದಾರೆ. ಜೊತೆಗೆ ಆಯೂಷ್, ಭಾರತೀಯ ವೈದ್ಯಕೀಯ ಸಂಶೋಧನೆ ಮಂಡಳಿ, ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗ, ಜೈವಿಕ ತಂತ್ರಜ್ಞಾನ, ಸಿಎಸ್‌ಐಆರ್, ಡಿಆರ್‌ಡಿಒ, ಆರೋಗ್ಯ ಸೇವೆ ಮತ್ತು ಮಾದಕ ನಿಯಂತ್ರಣ ಇಲಾಖೆಯ ಡಿಜಿ ಟಾಸ್ಕ್ ಫೋರ್ಸ್ ಸದಸ್ಯರಾಗಿದ್ದಾರೆ.
ಸ್ಥಳೀಯ ಮಟ್ಟದಲ್ಲಿನ ಕೋವಿಡ್ ಬೆಳವಣಿಗೆಗಳಿಗೆ ಅನುಗುಣವಾಗಿ ರಾಜ್ಯ ಸರ್ಕಾರಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಕೇಂದ್ರ ಸರ್ಕಾರದ ಮಾರ್ಗಸೂಚಿಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಬಿಗಿಗೊಳಿಸಬಹುದು ಅಂತ ಹೇಳಿದ್ದಾರೆ. 755 ಆಸ್ಪತ್ರೆಗಳನ್ನು ಕೋವಿಡ್19 ಆಸ್ಪತ್ರೆಗಳೆಂದು ಘೋಷಿಸಲಾಗಿದೆ. 1,389 ಹೇಲ್ತ್ ಕೇರ್ ಸೆಂಟರ್‌ಗಳನ್ನು ನಿರ್ಮಿಸಲಾಗಿದೆ ಎಂದು ಲಾವ್ ಅಗರ್‌ವಾಲ್ ಹೇಳಿದರು. ದೇಶದಲ್ಲಿ ಈವರೆಗೆ 3 ಲಕ್ಷ 86 ಸಾವಿರದ 791 ಮಂದಿಗೆ ಕೊರೊನಾ ಪರೀಕ್ಷೆ ನಡೆಸಲಾಗಿದೆ. ಎಂದು ಐಸಿಎಂಆರ್‌ನ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ದೇಶದಲ್ಲಿಂದು ಕಳೆದ 24 ಗಂಟೆಗಳಲ್ಲಿ 1 ಸಾವಿರದ 331 ಹೊಸ ಪ್ರಕರಣಗಳು ದಾಖಲಾಗಿದ್ದು, 27 ಮಂದಿ ಕೊರೊನಾ ಸೋಂಕು ತಗುಲಿ ಮೃತಪಟ್ಟಿದ್ದಾರೆ. ಒಟ್ಟು ಪ್ರಕರಣಗಳ ಸಂಖ್ಯೆ 15,712ಕ್ಕೆ ಏರಿಕೆಯಾಗಿದ್ದರೆ, ಸಾವಿನ ಸಂಖ್ಯೆ 507ಕ್ಕೆ ಬಂದು ನಿಂತಿದೆ. 2 ಸಾವಿರದ 231 (ಶೇಕಡಾ 14.19 ರಷ್ಟು) ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.