ನವದೆಹಲಿ: ಭಾರತ ಹಾಗೂ ಚೀನಾದ ಗಡಿಯಲ್ಲಿನ ಸಂಘರ್ಷ ಕಡಿಮೆ ಮಾಡುವ ನಿಟ್ಟಿನಲ್ಲಿ ಉಭಯ ದೇಶಗಳ ನಡುವೆ ನಾಲ್ಕನೇ ಬಾರಿಯ ಕಮಾಂಡರ್ ಹಂತದ ಮಾತುಕತೆಗಳು ಪೂರ್ವ ಲಡಾಖ್ನ ಚುನ್ಶುಲ್ ಬಾರ್ಡರ್ ಪೋಸ್ಟ್ನಲ್ಲಿ ನಡೆದಿದೆ.
ಮಂಗಳವಾರ ಬೆಳಗ್ಗೆ 11.30ಕ್ಕೆ ಆರಂಭವಾದ ಮಾತುಕತೆ ಇಂದು ಮುಂಜಾನೆ 2 ಗಂಟೆಗೆ ಅಂತ್ಯಗೊಂಡಿದ್ದು, ಸುಮಾರು 14 ಗಂಟೆಗಳ ಕಾಲ ಮಾತುಕತೆ ನಡೆದಿದೆ.
ಜುಲೈ 5ರಂದು ಈ ಕುರಿತಾಗಿ ಮಾತುಕತೆ ನಡೆದಿದ್ದು, ಭಾರತದ ಭದ್ರತಾ ಸಲಹೆಗಾರರಾದ ಅಜಿತ್ ದೋವಲ್ ಹಾಗೂ ಚೀನಾದ ಸ್ಟೇಟ್ ಕೌನ್ಸಿಲರ್ ಮತ್ತು ವಿದೇಶಾಂಗ ಸಚಿವರಾದ ವ್ಯಾಂಗ್ ಯಿ ಜೊತೆ ದೂರವಾಣಿಯಲ್ಲಿ ಮಾತುಕತೆ ನಡೆಸಿದ್ದರು. ಈ ವೇಳೆ, ಉಭಯ ರಾಷ್ಟ್ರಗಳ ಎಲ್ಎಸಿ ಯಲ್ಲಿ ಸೈನ್ಯ ತೆರವಿಗೆ ಸಹಮತ ಸೂಚಿಸಿದ್ದವು.
ಇದರ ಬೆನ್ನಲ್ಲೇ ಚೀನಾ ಸೇನೆ ಕೆಲವು ಗಾಲ್ವಾನ್ ಕಣಿವೆ, ಹಾಟ್ ಸ್ಪ್ರಿಂಗ್ ಹಾಗೂ ಗಸ್ತು (ಪ್ಯಾಟ್ರೋಲಿಂಗ್) ಪಾಯಿಂಟ್ 15ರಿಂದ ಸುಮಾರು 2 ಕಿಲೋಮೀಟರ್ ಹಿಂದಕ್ಕೆ ಸರಿದಿತ್ತು.
ಇದಕ್ಕೆ ಸಕಾರಾತ್ಮಕ ಪ್ರತಿಕ್ರಿಯೆ ನೀಡಿದ ಭಾರತವೂ ಕೂಡಾ ಕೆಲವು ಪ್ರದೇಶಗಳಿಂದ ತನ್ನ ಸೇನೆಯನ್ನು ಹಿಂದಕ್ಕೆ ಸರಿಸಿತ್ತು. ಈಗ ಕಮಾಂಡರ್ ಹಂತದ ಮಾತುಕತೆ ನಡೆದಿದ್ದು, ಮತ್ತಷ್ಟು ಶಾಂತಿ ಸ್ಥಾಪನೆಯ ಪ್ರಕ್ರಿಯೆಗಳು ಜರುಗುತ್ತಿವೆ.