ನವದೆಹಲಿ: ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದತಿಯ ವಿರುದ್ಧ ಸುಪ್ರೀಂಕೋರ್ಟ್ನಲ್ಲಿ ಸಲ್ಲಿಕೆಯಾಗಿರುವ ಅರ್ಜಿಯನ್ನು ನಿಷೇಧಾಜ್ಞೆಯ ಸಂಪೂರ್ಣ ತೆರವಿನ ಬಳಿಕ ವಿಚಾರಣೆ ನಡೆಸುವುದಾಗಿ ತಿಳಿಸಿ, ಮುಂದಿನ ವಾರಕ್ಕೆ ಅರ್ಜಿ ವಿಚಾರಣೆ ಮುಂದೂಡಿದೆ.
ಕಾಶ್ಮೀರದ ವಿಚಾರಕ್ಕೆ ಸಂಬಂಧಿಸಿದಂತೆ ಸೂಕ್ತ ಕಾರಣವಿಲ್ಲದೇ ಅರ್ಜಿ ಸಲ್ಲಿಕೆ ಮಾಡಿದ ಅರ್ಜಿದಾರ ಎಂ.ಎಲ್.ಶರ್ಮಾ ವಿರುದ್ಧ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಆಕ್ರೋಶಗೊಂಡ ಘಟನೆಯೂ ನಡೆಯಿತು.
ಇಂತಹ ಅರ್ಜಿಯನ್ನು ವಿಚಾರಣೆ ಮಾಡಲು ಸಾಧ್ಯವಿಲ್ಲ. ನಾನು ಈ ಅರ್ಜಿಯನ್ನು ಅರ್ಧ ಗಂಟೆಗಳ ಕಾಲ ಓದಿದೆ. ಆದರೆ, ವಿಷಯವನ್ನು ಅರ್ಥೈಸಲು ಸಾಧ್ಯವಾಗಿಲ್ಲ ಎಂದು ರಂಜನ್ ಗೊಗೊಯ್ ಅರ್ಜಿದಾರರ ವಿರುದ್ಧ ಕೆಂಗಣ್ಣು ಬೀರಿದರು.
ಮೌಲ್ಯವಿಲ್ಲದೇ ಅರ್ಜಿಯನ್ನು ಸಲ್ಲಿಕ್ಕೆ ಮಾಡಿದ ಕಾರಣಕ್ಕೆ ಅರ್ಜಿದಾರ ಎಂ.ಎಲ್.ಶರ್ಮಾ ವಿರುದ್ಧ ಭಾರಿ ದಂಡ ವಿಧಿಸಲು ಮುಖ್ಯ ನ್ಯಾಯಮೂರ್ತಿ ಮುಂದಾಗಿದ್ದರು. ಆದರೆ ಅರ್ಜಿದಾರರ ಆರೋಗ್ಯ ಹದಗೆಟ್ಟಿರುವುದನ್ನು ಗಮನಿಸಿ ಎಚ್ಚರಿಕೆ ನೀಡಿದ್ದಾರೆ.
ಆರು ಅರ್ಜಿ ಸಲ್ಲಿಕೆ:
ಕಾಶ್ಮೀರದ ಸದ್ಯದ ಬೆಳವಣಿಗೆ ಕುರಿತಂತೆ ಸುಪ್ರೀಂನಲ್ಲಿ ಆರು ಅರ್ಜಿ ಸಲ್ಲಿಕೆಯಾಗಿದೆ. ಅಯೋಧ್ಯ ಭೂವಿವಾದದ ನಿತ್ಯ ವಿಚಾರಣೆ ಚಾಲ್ತಿಯಲ್ಲಿದ್ದು, ಇದರ ಮಧ್ಯೆಯೇ ಈ ಎಲ್ಲ ಅರ್ಜಿಯನ್ನು ವಿಚಾರಣೆ ಮಾಡುವುದಾಗಿ ಸರ್ವೋಚ್ಛ ನ್ಯಾಯಾಲಯ ಹೇಳಿದೆ.
ಸೋಮವಾರ ಶಾಲಾ-ಕಾಲೇಜುಗಳು ಪುನರಾರಂಭ:
ಸುಮಾರು ಎರಡು ವಾರದಿಂದ ತಟಸ್ಥವಾಗಿದ್ದ ಕಣಿವೆ ರಾಜ್ಯದಲ್ಲಿ ಸೋಮವಾರದಿಂದ ಶಾಲಾ-ಕಾಲೇಜುಗಳು ಮತ್ತೆ ಕಾರ್ಯಾರಂಭವಾಗಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಜಮ್ಮು ಕಾಶ್ಮೀರದಲ್ಲಿ ಹೇರಿಕೆಯಾಗಿರುವ ನಿಷೇಧಾಜ್ಞೆ ಇನ್ನು ಕೆಲವೇ ದಿನಗಳಲ್ಲಿ ಸಂಪೂರ್ಣವಾಗಿ ತೆರವುಗೊಳಿಸಲಾಗುವುದು ಎಂದು ಸುಪ್ರೀಂಕೋರ್ಟ್ಗೆ ಕೇಂದ್ರ ತಿಳಿಸಿದೆ.