ನವದೆಹಲಿ: ಸಿಎಎ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಗಳ ಮಧ್ಯೆ ಕೆಲವು ರಾಜ್ಯಗಳಲ್ಲಿ ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್‌ಎಸ್‌ಎ) ಹೇರಿರುವುದನ್ನ ಪ್ರಶ್ನಿಸಿ ಸಲ್ಲಿಸಿದ್ದ ಮನವಿಯನ್ನು ಸುಪ್ರೀಂಕೋರ್ಟ್ ಇಂದು ತಳ್ಳಿ ಹಾಕಿದೆ.
ನ್ಯಾಯಮೂರ್ತಿಗಳಾದ ಅರುಣ್ ಮಿಶ್ರಾ ಮತ್ತು ಇಂದಿರಾ ಬ್ಯಾನರ್ಜಿ ಅವರ ನ್ಯಾಯಪೀಠವು ಎನ್ಎಸ್ಎಗೆ ಸಂಬಂಧಪಟ್ಟಂತೆ ಆದೇಶ ನೀಡಲು ಸಾಧ್ಯವಾಗದು ಎಂದು ಹೇಳಿಕೆ ನೀಡಿದ್ದು, ಈ ಅರ್ಜಿಯನ್ನು ಹಿಂಪಡೆಯುವಂತೆ ವಕೀಲ ಎಂ ಎಲ್ ಶರ್ಮಾ ಅವರಿಗೆ ಸೂಚನೆ ನೀಡಿದೆ.
ಎನ್‌ಎಸ್‌ಎ ಉಲ್ಲಂಘನೆಯ ಬಗ್ಗೆ ನಿರ್ದಿಷ್ಟ ವಿವರಗಳನ್ನು ನೀಡುವಂತೆ ಹಾಗೂ ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಅವಶ್ಯವಿದ್ದರೆ ಹೊಸ ಅರ್ಜಿ ಸಲ್ಲಿಸುವಂತೆ ನ್ಯಾಯಪೀಠ ಶರ್ಮಾ ಅವರಿಗೆ ತಿಳಿಸಿದೆ.
ಪೌರತ್ವ ತಿದ್ದುಪಡಿ ಕಾಯ್ದೆ, ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಪಿಆರ್) ಮತ್ತು ಭಾರತೀಯ ನಾಗರಿಕರ ರಾಷ್ಟ್ರೀಯ ದಾಖಲಾತಿ (ಎನ್‌ಆರ್‌ಐಸಿ) ವಿರುದ್ಧ ಪ್ರತಿಭಟಿಸುತ್ತಿರುವ ಜನರನ್ನು ನಿಗ್ರಹಿಸಲು ಕೇಂದ್ರ ಸರ್ಕಾರ ಈ ರೀತಿ ಮಾಡಿದೆ ಎಂದು ಶರ್ಮಾ ನ್ಯಾಯಾಲಯಕ್ಕೆ ಮನವಿ ಮೂಲಕ ತಿಳಿಸಿದ್ದರು.
ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್, ಜನವರಿ 10 ರಿಂದ ಎನ್ಎಸ್ಎ ಅಡಿ ದೆಹಲಿ ಪೊಲೀಸರಿಗೆ ನೀಡಲಾಗಿರುವ ಬಂಧನ ಅಧಿಕಾರವನ್ನು ಜನವರಿ 19 ರಿಂದ ಮೂರು ತಿಂಗಳ ಅವಧಿಗೆ ವಿಸ್ತರಿಸಲಾಗಿದೆ. ಇದರಿಂದಾಗಿ ವಿಚಾರಣೆಯಿಲ್ಲದೆಯೇ ವ್ಯಕ್ತಿಯನ್ನು 12 ತಿಂಗಳ ಕಾಲ ಬಂಧಿಸಲು ಪೊಲೀಸರಿಗೆ ಅವಕಾಶ ನೀಡಿದಂತಾಗಿದೆ.