ನವದೆಹಲಿ: ಲಾಕ್‌ಡೌನ್‌ನಿಂದಾಗಿ ತಮ್ಮ ಊರುಗಳಿಗೆ ಹೋಗಲು ಮುಂದಾಗಿರುವ ವಲಸೆ ಕಾರ್ಮಿಕರಿಗೆ ರಾಜ್ಯ ಸರ್ಕಾರಗಳೇ ಉಚಿತ ಸಾರಿಗೆ, ಊಟ ಮತ್ತು ವಸತಿ ಸೌಲಭ್ಯ ಕಲ್ಪಿಸಬೇಕು ಎಂದು ಸುಪ್ರೀಂಕೋರ್ಟ್ ಸೂಚಿಸಿದೆ.
ವಲಸೆ ಕಾರ್ಮಿಕರ ಕುರಿತು ಇಂದು ಅರ್ಜಿ ವಿಚಾರಣೆ ನಡೆಸಿರುವ ನ್ಯಾಯಾಲಯ, ವಲಸೆ ಕಾರ್ಮಿಕರ ಸ್ವಂತ ಸ್ಥಳಗಳಿಗೆ ಹೋಗಲು ಅನುಭವಿಸುತ್ತಿರುವ ಸಂಕಷ್ಟ ನಮಗೆ ಅರ್ಥವಾಗುತ್ತದೆ. ಹಲವರು ಊರುಗಳಿಗೆ ಹೋಗಲು ವಿಫಲವಾಗುತ್ತಿದ್ದಾರೆ. ಹೀಗಾಗಿ ವಲಸೆ ಕಾರ್ಮಿಕರು ತಮ್ಮೂರಿಗೆ ಹೋಗಲು ನೋಂದಣಿ, ಸಾರಿಗೆ, ಊಟ ಹಾಗೂ ನೀರಿನ ವ್ಯವಸ್ಥೆಯನ್ನು ರಾಜ್ಯ ಸರ್ಕಾರವೇ ಕಲ್ಪಿಸಬೇಕು ಎಂದು ಸೂಚಿಸುತ್ತಿರುವುದಾಗಿ ಕೋರ್ಟ್ ತಿಳಿಸಿದೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಕೆಲ ನಿರ್ದೇಶನಗಳನ್ನು ನೀಡಿರುವ ಕೋರ್ಟ್ ಕೂಡಲೇ ಇವುಗಳನ್ನು ಪಾಲಿಸುವಂತೆ ಸೂಚಿಸಿದೆ.
- ವಲಸೆ ಕಾರ್ಮಿಕರಿಂದ ಬಸ್ ಅಥವಾ ರೈಲು ಸೇವೆಗಾಗಿ ಹಣ ಪಡೆಯಬಾರದು. ರೈಲೆ ಟಿಕೆಟ್ ದರದ ಪಾಲನ್ನು ರಾಜ್ಯ ಸರ್ಕಾರಗಳು ನೀಡಬೇಕು.
- ಸಂಕಷ್ಟಕ್ಕೆ ಸಿಲುಕಿರುವ ಎಲ್ಲ ಕಾರ್ಮಿಕರಿಗೆ ಆಯಾ ರಾಜ್ಯಗಳು ಅಥವಾ ಕೇಂದ್ರಾಡಳಿತ ಪ್ರದೇಶಗಳೇ ಊಟದ ವ್ಯವಸ್ಥೆಯನ್ನು ಮಾಡಬೇಕು. ಬಸ್ ಅಥವಾ ರೈಲುಗಳ ಸೇವೆ ಸಿಗುವವರಿಗೆ ಈ ಸೇವೆಯನ್ನು ಮುಂದುವರೆಸಬೇಕು.
- ವಲಸೆ ಕಾರ್ಮಿಕರ ನೋಂದಣಿಯಾಗಿರುವ ಬಗ್ಗೆ ರಾಜ್ಯ ಸರ್ಕಾರ ಖಾತ್ರಿ ಪಡಿಸಿಕೊಳ್ಳಬೇಕು. ಬಸ್ ಅಥವಾ ರೈಲು ಸೇವೆಗಾಗಿ ಕಾರ್ಮಿಕರ ಮೊದಲೇ ಬರುವಂತೆ ನೋಡಿಕೊಳ್ಳಬೇಕು.
- ಈ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳು ಮಾಹಿತಿಯನ್ನು ಪ್ರಕಟಿಸಬೇಕು. ಈ ಎಲ್ಲ ಅಂಶಗಳನ್ನು ಕೂಡಲೇ ಪಾಲಿಸಬೇಕು ಎಂದು ಸೂಚಿಸಿ ಮುಂದಿನ ವಿಚಾರಣೆಯನ್ನು ಜೂನ್ 5ಕ್ಕೆ ಮುಂದೂಡಿದೆ.