ನವದೆಹಲಿ: ಉಗ್ರರನ್ನು ಪೋಷಿಸುತ್ತಿರುವ ಪಾಕಿಸ್ತಾನದ ಅಸಲಿ ಮುಖವನ್ನು ಭಾರತ ಆಗಾಗ ಬೆತ್ತಲುಗೊಳಿಸುತ್ತಲೇ ಇದೆ. ಪಾಕ್ನ ಈ ನಡೆಯನ್ನು ಭಾರತ ಪ್ರತಿಯೊಂದು ಹಂತದಲ್ಲೂ ಖಂಡಿಸುತ್ತಲೇ ಬಂದಿದೆ. ಈಗ ಭಾರತದ ವಿದೇಶಾಂಗ ಸಚಿವ ಸುಬ್ರಹ್ಮಣ್ಯಂ ಜೈಶಂಕರ್ ಅವರು ಪಾಕಿಸ್ತಾನವನ್ನು ಇದೇ ವಿಚಾರಕ್ಕೆ ಚುಚ್ಚಿದ್ದಾರೆ.
ಭಾರತ ಸೇರಿದಂತೆ ವಿಶ್ವದ ಅಗ್ರರಾಷ್ಟ್ರಗಳು, ಉಗ್ರರ ಪೋಷಣೆ ವಿಚಾರದಲ್ಲಿ ಪಾಕಿಸ್ತಾನಕ್ಕೆ ಬುದ್ಧಿ ಹೇಳುತ್ತಲೇ ಬಂದಿದ್ದರೂ ಇಮ್ರಾನ್ ಸರ್ಕಾರ ಮಾತ್ರ ಹಳೆ ಚಾಳಿಯನ್ನು ಮುಂದುವರೆಸುತ್ತಲೇ ಬಂದಿದೆ. ಭಯೋತ್ಪಾದನೆಯನ್ನು ಪ್ರೋತ್ಸಾಹಿಸುವ ರಾಷ್ಟ್ರದ ಜೊತೆಗೆ ಯಾವ ದೇಶ ಸಂಬಂಧ ಬೆಳೆಸುತ್ತದೆ ಎಂದು ಜೈಶಂಕರ್ ಚಾಟಿ ಬೀಸಿದ್ದಾರೆ.
ಭಾರತ ಹಾಗೂ ಪಾಕಿಸ್ತಾನದ ನಡುವಿನ ಸಂಬಂಧ ಬಹುತೇಕ ಶೂನ್ಯ ಎಂದು ಜೈಶಂಕರ್ ಬಣ್ಣಿಸಿದ್ದಾರೆ. ಪಾಕಿಸ್ತಾನ ಭಯೋತ್ಪಾದಕರನ್ನು ಉತ್ಪಾದಿಸುವ ಕಾರ್ಖಾನೆ ಮತ್ತು ಆ ಉಗ್ರರನ್ನು ಭಾರತದ ಮೇಲೆ ದಾಳಿಗೆ ಕಳುಹಿಸುತ್ತಿದೆ. ಈ ರೀತಿ ಕೃತ್ಯ ಎಸಗುವ ದೇಶದೊಂದಿಗೆ ಯಾವ ದೇಶ ಮಾತುಕತೆ ನಡೆಸುತ್ತದೆ ಮತ್ತು ಸಂಬಂಧ ಬೆಳೆಸಲು ಮುಂದಾಗುತ್ತದೆ ಎಂದು ಭಾರತದ ವಿದೇಶಾಂಗ ಸಚಿವ ನೇರವಾಗಿ ಹರಿಹಾಯ್ದಿದ್ದಾರೆ.
ದ್ವಿಪಕ್ಷೀಯ ಸಂಬಂಧಗಳು ಅತ್ಯಂತ ಕಠಿಣ ಎಂದು ಕಳೆದ ಕೆಲ ವರ್ಷಗಳಲ್ಲಿ ಕಂಡುಬಂದಿಲ್ಲ. ಆದರೆ ಪಾಕಿಸ್ತಾನ ಮುಕ್ತವಾಗಿ ಮಾತುಕತೆ ಬರುವ ಮುನ್ನ ಉಗ್ರರನ್ನು ನಿರ್ಮೂಲನೆ ಮಾಡುವ ಮನಸ್ಸು ಮಾಡಬೇಕು ಎಂದು ಜೈಶಂಕರ್ ಹೇಳಿದ್ದಾರೆ.