ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಕುರಿತು ಪ್ರತಿಪಕ್ಷಗಳಿಗಿರುವ ಸಂದೇಹಗಳಿಗೆ ಮನವರಿಕೆ ಮಾಡಿಕೊಡುವಂತೆ ಆರ್‌ಎಸ್‌ಎಸ್ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ. ಇದಕ್ಕೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ಶ್ರೀಪಾದ್ ನಾಯಕ್ ಅವರು ಮತ್ತೊಮ್ಮೆ ಮನವರಿಕೆ ಮಾಡಿಕೊಡಲು ಸಿದ್ದರಿದ್ದೇವೆ ಎಂದು ಭರವಸೆ ನೀಡಿದ್ದಾರೆ.
ಈಗಾಗಲೇ ಸಿಎಎ ಕುರಿತು ಎಲ್ಲರಿಗೂ ಅರ್ಥವಾಗುವಂತೆ ವಿವರವಾಗಿ, ಸ್ಪಷ್ಟವಾಗಿ ಹೇಳಿದ್ದೇವೆ. ಅಲ್ಲದೇ, ಯಾವುದನ್ನೂ ಮುಚ್ಚಿಟ್ಟಿಲ್ಲ. ಕಾಯ್ದೆಯಲ್ಲಿನ ಪ್ರತಿಯೊಂದು ಅಂಶವನ್ನು ಜನರ ಮತ್ತು ಪ್ರತಿಪಕ್ಷಗಳ ಮುಂದಿಟ್ಟಿದ್ದೇವೆ. ಆದರೂ ನಿಮ್ಮಲ್ಲಿ ಯಾವುದೇ ಸಂದೇಹಗಳಿದ್ದರೆ, ನಮ್ಮೊಂದಿಗೆ ಚರ್ಚಿಸಿ. ಅವುಗಳಿಗೆ ಸ್ಪಷ್ಟತೆ ನೀಡುತ್ತೇವೆ ಎಂದು ತಿಳಿಸಿದ್ದಾರೆ.
ಸಿಎಎ ಕುರಿತು ಸ್ಪಷ್ಟತೆ ನೀಡಲು ಪ್ರತಿಪಕ್ಷಗಳೊಂದಿಗೆ ಒಂದು ಸಂವಾದವನ್ನು ಏರ್ಪಡಿಸಬೇಕು. ಪ್ರತಿಪಕ್ಷಗಳ ಸಂದೇಹಗಳಿಗೆ ಸ್ಪಷ್ಟತೆ ನೀಡಬೇಕಾಗಿರುವುದು ಕೇಂದ್ರ ಸರ್ಕಾರದ ಕರ್ತವ್ಯ. ಈ ನಿಟ್ಟಿನಲ್ಲಿ ಪ್ರಧಾನಿ ಮತ್ತು ಗೃಹ ಸಚಿವ ಅಮಿತ್ ಶಾ ಸಂವಾದ ಆಯೋಜಿಸಬೇಕು ಎಂದು ಆರ್‌ಎಸ್‌ಎಸ್ ಪ್ರಧಾನ ಕಾರ್ಯದರ್ಶಿ ಸುರೇಶ್ ಭಯ್ಯಾಜಿ ಜೋಶಿ ಹೇಳಿದರು.