ಹೈದರಾಬಾದ್: ಶುಕ್ರವಾರ ಟೀಂ ಇಂಡಿಯಾ-ವೆಸ್ಟ್ ಇಂಡೀಸ್ ತಂಡಗಳ ನಡುವೆ ಮೊದಲ ಟಿ-20 ಕ್ರಿಕೆಟ್ ಪಂದ್ಯ ನಡೆಯಲಿದ್ದು, ಉಭಯ ತಂಡಗಳು ಭರ್ಜರಿ ತಾಲೀಮು ನಡೆಸುತ್ತಿವೆ.
ಹಿಟ್ಮ್ಯಾನ್ ರೋಹಿತ್ ಶರ್ಮಾ ಮಗದೊಂದು ಸ್ಮರಣೀಯ ದಾಖಲೆ ನಿರ್ಮಿಸುವ ಅಪರೂಪದ ಕ್ಷಣದ ಸನಿಹದಲ್ಲಿದ್ದು, ವಿಂಡೀಸ್ ವಿರುದ್ಧದ ಮೊದಲ ಟಿ-20 ಪಂದ್ಯದಲ್ಲೇ ಇದು ನಿಜವಾಗುವ ಸಾಧ್ಯತೆ ಇದೆ.
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 400 ಸಿಕ್ಸರ್‌ಗಳ ದಾಖಲೆ ತಲುಪಲು ರೋಹಿತ್ ಶರ್ಮಾಗೆ ಕೇವಲ ಒಂದು ಸಿಕ್ಸರ್ ಸಿಡಿಸಬೇಕಾದ ಅವಶ್ಯಕತೆ ಇದೆ. ಈ ಮೂಲಕ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 400 ಸಿಕ್ಸರ್ ಬಾರಿಸಿದ ಭಾರತದ ಮೊಟ್ಟ ಮೊದಲ ಬ್ಯಾಟ್ಸ್‌ಮನ್ ಎಂಬ ಕೀರ್ತಿಗೆ ಭಾಜನರಾಗಲಿದ್ದಾರೆ. ಶರ್ಮಾ ಬ್ಯಾಟ್‌ನಿಂದ ಈಗಾಗಲೇ ಏಕದಿನ ಕ್ರಿಕೆಟ್‌ನಲ್ಲಿ 232 ಸಿಕ್ಸರ್, ಟೆಸ್ಟ್‌ನಲ್ಲಿ 51 ಸಿಕ್ಸರ್ ಹಾಗೂ ಟಿ-20ಯಲ್ಲಿ 115 ಸಿಕ್ಸರ್ ಸಿಡಿದಿದೆ.
ಸದ್ಯ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಪಟ್ಟಿಯಲ್ಲಿ ರೋಹಿತ್ ಶರ್ಮಾ ಮೂರನೇ ಸ್ಥಾನದಲ್ಲಿದ್ದಾರೆ. ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ವೆಸ್ಟ್‌ಇಂಡೀಸ್‌ನ ದೈತ್ಯ ಕ್ರಿಸ್ ಗೇಲ್ 534 ಸಿಕ್ಸರ್‌ಗಳನ್ನು ಹೊಡೆದಿದ್ದಾರೆ. ಎರಡನೇ ಸ್ಥಾನದಲ್ಲಿರುವ ಪಾಕಿಸ್ತಾನದ ಮಾಜಿ ನಾಯಕ ಶಾಹಿದ್ ಆಫ್ರಿದಿ 476 ಸಿಕ್ಸರ್ ಬಾರಿಸಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ದಾಖಲಿಸಿದವರು:
534 ಕ್ರಿಸ್ ಗೇಲ್ (530 ಇನ್ನಿಂಗ್ಸ್)
476 ಶಾಹಿದ್ ಆಫ್ರಿದಿ (508 ಇನ್ನಿಂಗ್ಸ್)
398 ರೋಹಿತ್ ಶರ್ಮಾ (354 ಇನ್ನಿಂಗ್ಸ್)
398 ಬ್ರೆಂಡನ್ ಮೆಕಲಮ್ (474 ಇನ್ನಿಂಗ್ಸ್)