ಮುಂಬೈ: ಭಾರತೀಯ ನೌಕಾಪಡೆಯ ಮಾಜಿ ಅಧಿಕಾರಿ ಮೇಲೆ ಶಿವಸೇನೆ ಕಾರ್ಯಕರ್ತರು ಹಲ್ಲೆ ಮಾಡಿರುವ ಆರೋಪ ಸಂಬಂಧ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಕುರಿತು ಕಾರ್ಟೂನ್ (ವ್ಯಂಗ್ಯಚಿತ್ರ)ಅನ್ನು ವ್ಯಾಟ್ಸಪ್ನಲ್ಲಿ ಹಂಚಿಕೊಂಡಿದ್ದ ಕಾರಣಕ್ಕೆ ನಿವೃತ್ತ ಸಿಬ್ಬಂದಿ ಮದನ್ ಶರ್ಮಾ ಮೇಲೆ ಕಾರ್ಯಕರ್ತರು ಹಲ್ಲೆ ನಡೆಸಿದ್ದರು.
ನೌಕಾಪಡೆಯ ನಿವೃತ್ತ ಅಧಿಕಾರಿ ಮದನ್ ಶರ್ಮಾ, ಠಾಕ್ರೆಯ ಕುರಿತ ಕಾರ್ಟೂನ್ ಒಂದನ್ನು ವ್ಯಾಟ್ಸಪ್ ಗ್ರೂಪ್ನಲ್ಲಿ ಹರಿಬಿಟ್ಟಿದ್ದಾರೆ. ಇದೇ ಕಾರಣಕ್ಕೆ ಶಿವಸೇನೆಯ ಕೆಲ ಕಾರ್ಯಕರ್ತರು ಅವರ ಮನೆ ಬಳಿ ಬಂದು ಥಳಿಸಿದ್ದಾರೆ. ಘಟನೆಯಲ್ಲಿ ಮದನ್ ಶರ್ಮಾ ಅವರ ಕಣ್ಣಿನ ಭಾಗಕ್ಕೆ ಹಾನಿಯಾಗಿ ಆಸ್ಪತ್ರೆಗೆ ದಾಖಲಾಗಿದ್ದರು ಎಂದು ಮೂಲಗಳು ತಿಳಿಸಿವೆ.
ಇನ್ನು ಈ ಘಟನೆ ಸಂಬಂಧ ದೂರು ದಾಖಲಾಗುತ್ತಿದ್ದಂತೆ ರಾತ್ರಿಯೇ 6 ಮಂದಿಯನ್ನು ಬಂಧಿಸಲಾಗಿದ್ದು, ಎಫ್ಐಆರ್ ಸಹ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ಕುರಿತಂತೆ ಪ್ರತಿಕ್ರಿಯಿಸಿರು ಮದನ್ ಶರ್ಮಾ, 'ನನಗೆ ಬಂದಿದ್ದ ವಾಟ್ಸಪ್ ಮೆಸೇಜ್ ಫಾರ್ವರ್ಡ್ ಮಾಡಿದ್ದೆ. ಇದಾದ ಬಳಿಕ ನನಗೆ ಬೆದರಿಕೆ ಕರೆಗಳು, ಸಂದೇಶಗಳು ಬರಲಾರಂಭಿಸಿವೆ. ನನ್ನೆಲ್ಲಾ ಜೀವನವನ್ನೇ ದೇಶ ಸೇವೆಯಲ್ಲಿ ತೊಡಗಿಸಿಕೊಂಡಿದ್ದೆ. ಈ ರೀತಿಯ ಸರ್ಕಾರ ಅಸ್ತಿತ್ವದಲ್ಲೇ ಇರಬಾರದು’ ಎಂದಿದ್ದಾರೆ.
ನೌಕಾಪಡೆ ನಿವೃತ್ತ ಅಧಿಕಾರಿ ಮೇಲೆ ಹಲ್ಲೆ ನಡೆಸಿದ್ದ ವಿಡಿಯೋ ವೈರಲ್ ಆದ ಬಳಿಕ ಆರೋಪಿಗಳನ್ನು ಬಂಧಿಸುವಂತೆ ಆಕ್ರೋಶ ವ್ಯಕ್ತವಾಗಿತ್ತು.