ನವದೆಹಲಿ: ಭಾರತದ ಆರ್ಥಿಕ ಪರಿಸ್ಥಿತಿ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ, ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಎಐಸಿಸಿ ಕೇಂದ್ರ ಕಚೇರಿಯಲ್ಲಿ ನಡೆದ ಸಭೆ ವೇಳೆ ಮಾತನಾಡಿದ ಅವರು, ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ(ಆರ್‌ಸಿಇಪಿ) ಒಪ್ಪಂದ ರೈತರು, ಚಿಕ್ಕ ಪುಟ್ಟ ಅಂಗಡಿಯವರು ಮತ್ತು ಸಣ್ಣ ಉದ್ಯಮಿಗಳಿಗೆ ಸಂಕಷ್ಟ ತಂದೊಡ್ಡಲಿದೆ ಎಂದು ಹೇಳಿದ್ದಾರೆ.
ಈ ದೇಶದ ಪ್ರಜೆ ಮತ್ತು ಜವಾಬ್ದಾರಿಯುತ ಪ್ರತಿಪಕ್ಷದ ಸದಸ್ಯೆಯಾಗಿ ಭಾರತೀಯ ಆರ್ಥಿಕತೆಯ ಮೇಲಾಗುತ್ತಿರುವ ದಾಳಿ ನನಗೆ ನೋವನ್ನುಂಟು ಮಾಡುತ್ತಿದೆ. ಇನ್ನೂ ಹೆಚ್ಚಿನ ಆತಂಕಕಾರಿ ಸಂಗತಿಯೆಂದರೆ ಇದನ್ನ ಸರ್ಕಾರ ಸಂಪೂರ್ಣವಾಗಿ ನಿರಾಕರಿಸುತ್ತಿದೆ ಎಂದು ಹೇಳಿದ್ದಾರೆ.
ಕೆಲ ಆರ್ಥಿಕ ನಿರ್ಧಾರಗಳು ಭಾರತದ ಆರ್ಥಿಕತೆಗೆ ಹಾನಿ ಮಾಡಿಲ್ಲ. ಆದರೆ ಈಗ ಏಷ್ಯಾದ 16 ದೇಶಗಳ ಪ್ರಾದೇಶಿಕ ಮುಕ್ತ ವ್ಯಾಪಾರದ ದೃಷ್ಟಿಯಿಂದ ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ ಒಪ್ಪಂದಕ್ಕೆ (ಆರ್‌ಸಿಇಪಿ) ಸಹಿ ಹಾಕುವ ಮೂಲಕ ಆರ್ಥಿಕತೆಗೆ ಮತ್ತಷ್ಟು ಪೆಟ್ಟು ಕೊಡಲು ಕೇಂದ್ರ ಸರ್ಕಾರ ಸಿದ್ಧವಾಗಿದೆ ಎಂದಿದ್ದಾರೆ.