ಫಿರೋಜಾಬಾದ್: ಕಳೆದ ಆರು ತಿಂಗಳ ಹಿಂದೆ ಯುವತಿ ಮೇಲೆ ಅತ್ಯಾಚಾರ ಮಾಡಿದ್ದ ಆರೋಪಿ ಇದೀಗ ಆಕೆಯ ತಂದೆಯ ಮೇಲೆ ಗುಂಡು ಹಾರಿಸಿ ಕೊಲೆ ಮಾಡಿರುವ ಘಟನೆ ಉತ್ತರಪ್ರದೇಶದ ಫಿರೋಜಾಬಾದ್ನಲ್ಲಿ ನಡೆದಿದೆ.
ಕಳೆದ ಆರು ತಿಂಗಳ ಹಿಂದೆ ಯುವತಿ ಮೇಲೆ ಅತ್ಯಾಚಾರವೆಸಗಿದ್ದ ವ್ಯಕ್ತಿ ತಲೆಮರೆಸಿಕೊಂಡು ಜೀವನ ನಡೆಸುತ್ತಿದ್ದನು. ಇದೀಗ ನಿನ್ನೆ ರಾತ್ರಿ ದಿಢೀರ್ ಆಗಿ ಮಹಿಳೆ ಮನೆಗೆ ನುಗ್ಗಿ ಗುಂಡಿಕ್ಕಿ ಆಕೆಯ ತಂದೆಯನ್ನ ಕೊಲೆ ಮಾಡಿದ್ದಾನೆ. ಮೃತ ವ್ಯಕ್ತಿಯನ್ನ ರಾಜೀವ್ ಕುಮಾರ್ ಎಂದು ಗುರುತಿಸಲಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ದೂರು ದಾಖಲು ಮಾಡಲಾಗಿದೆ.
ಅತ್ಯಾಚಾರವೆಸಗಿದ್ದ ವ್ಯಕ್ತಿ ಬಗ್ಗೆ ಮಾಹಿತಿ ನೀಡಿದವರಿಗೆ 15,000 ರೂ ನಗದು ಹಣ ನೀಡಲಾಗುವುದು ಎಂದು ಈ ಹಿಂದೆ ಆಗ್ರಾ ಪೊಲೀಸ್ ಇನ್ಸ್ಪೆಕ್ಟರ್ ಸತೀಶ್ ಮಾಹಿತಿ ನೀಡಿದ್ದರು. ಆದರೆ, ಇದೀಗ ಅದನ್ನ 50,000 ರೂ.ಗೆ ಏರಿಕೆ ಮಾಡಲಾಗಿದೆ. ಕಳೆದ ಆರು ತಿಂಗಳ ಹಿಂದೆ ಈ ಘಟನೆ ನಡೆದಿದ್ದರೂ ಇಲ್ಲಿಯವರೆಗೆ ಅಪರಾಧಿ ಕುಟುಂಬದ ವಿರುದ್ಧ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ದೂರೂ ಕೇಳಿ ಬಂದಿದೆ.