ಕೋಲ್ಕತಾ: ಜೂಮ್ ಅಪ್ಲಿಕೇಷನ್ ಮೂಲಕ ವರ್ಕ್ ಫ್ರಮ್ ಹೋಮ್(Work from Home) ಮಾಡುತ್ತಿದ್ದ ಕೋಲ್ಕತ್ತಾ ಮೂಲದ ಇಬ್ಬರು ವ್ಯಕ್ತಿಗಳಿಗೆ ಹ್ಯಾಕರ್‌ಗಳು ಬಿಟ್ ಕಾಯಿನ್ ಮೂಲಕ ಹಣ ಪಾವತಿಸುವಂತೆ ಬೆದರಿಕೆ ಹಾಕಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ತಮ್ಮ ಕಂಪ್ಯೂಟರ್‌ಗಳಿಂದ ಕದ್ದಿರುವ ಡೇಟಾವನ್ನು ಬಿಡುಗಡೆ ಮಾಡಬಾರದು ಎಂದರೆ ಹಣ ನೀಡುವಂತೆ ಸುಲಿಗೆಗೆ ಇಳಿದಿದ್ದಾರೆ ಎಂದು ಕೋಲ್ಕತಾ ಪೊಲೀಸ್ ಹಿರಿಯ ಅಧಿಕಾರಿ ತಿಳಿಸಿದ್ದಾರೆ.
ಇಬ್ಬರು ಕೂಡ ಜೂಮ್ ಆ್ಯಪ್ ಬಳಕೆದಾರರಾಗಿದ್ದಾರೆ. ಬಿಟ್ ಕಾಯಿನ್ ಮೂಲಕ ಪಾವತಿ ಮಾಡುವಂತೆ ಈ ಮೇಲೆ ಮೂಲಕ ಬೆದರಿಕೆ ಹಾಕಲಾಗಿದೆ. ಅಲ್ಲದೇ ಬಿಟ್ ಕಾಯಿನ್ಗಳನ್ನು ಖರೀದಿಸಲು ನಿರ್ದಿಷ್ಟ ಲಿಂಕ್ ಅನ್ನೂ ಮೇಲ್ನಲ್ಲಿ ಹಂಚಿಕೊಳ್ಳಲಾಗಿದೆ ಎಂದು ಕೋಲ್ಕತ್ತಾ ಸೈಬರ್ ಅಪರಾಧ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.
ತಮ್ಮ ಬೇಡಿಕೆ ಪ್ರಕಾರ ಹಣ ನೀಡದಿದ್ದರೆ ಡೇಟಾವನ್ನು ಶಾಶ್ವತವಾಗಿ ಕಳೆದುಳ್ಳುತ್ತೀರಾ ಎಂದು ಹ್ಯಾಕರ್‌ಗಳು ಬೆದರಿಕೆ ಹಾಕಿದ್ದಾರೆ. ದೂರುದಾರರೊಬ್ಬರ ಪ್ರಕಾರ ಹ್ಯಾಕರ್‌ಗಳು 1,000 ಡಾಲರ್ ನೀಡಲು ಒತ್ತಾಯಿಸಿದ್ದಾರೆ ಎಂದು ತಿಳಿದುಬಂದಿದೆ. ಪ್ರಕರಣ ಕುರಿತಂತೆ ಸೈಬರ್ ಅಪರಾಧ ವಿಭಾಗದ ಹೊರತಾಗಿ, ವಿಶೇಷ ಕಾರ್ಯಪಡೆ ಕೂಡ ಈ ಬಗ್ಗೆ ತನಿಖೆ ಆರಂಭಿಸಿದೆ ಎಂದು ಪೊಲೀಸರು ಹೇಳಿದ್ದಾರೆ.