ಅಜ್ಮೀರ್ (ರಾಜಸ್ಥಾನ): ಮಾರಣಾಂತಿಕ ಕೊರೊನಾ ವೈರಸ್‌ಗೆ ಇನ್ನೂ ಯಾವುದೇ ಲಸಿಕೆ ಲಭ್ಯವಿಲ್ಲದ ಕಾರಣ, ರಾಜಸ್ಥಾನದ ಯುವ ಶಿಕ್ಷಕರೊಬ್ಬರು ರಾಜ್ಯ ಆರೋಗ್ಯ ಸಚಿವರಿಗೆ ಪತ್ರವೊಂದನ್ನು ಬರೆದಿದ್ದು, ತನ್ನ ದೇಹವನ್ನು ವೈದ್ಯಕೀಯ ಸಂಶೋಧನೆಗೆ ಅರ್ಪಿಸಲಿಚ್ಛಿಸಿರುವುದಾಗಿ ತಿಳಿಸಿದ್ದಾರೆ.
ಕೇಕ್ರಿ ನಿವಾಸಿ ದಿನೇಶ ವೈಷ್ಣವ್, ಜಿಲ್ಲೆಯ ಮಂದ ಶಾಲೆಯಲ್ಲಿ ಕಲಿಸುತ್ತಿದ್ದಾರೆ. ಈ ಮೊದಲು ತಮ್ಮ ಮೂರು ದಿನಗಳ ವೇತನವನ್ನು ಸಿಎಂ ಪರಿಹಾರ ನಿಧಿಗೆ ನೀಡಿದ್ದರು. ಅಷ್ಟೇ ಅಲ್ಲದೇ, ಲಾಕ್ ಡೌನ್ ಶುರುವಾದಾಗಿನಿಂದ ನಿರ್ಗತಿಕರಿಗೆ ಪಡಿತರವನ್ನು ಕೂಡ ವಿತರಿಸುತ್ತಿದ್ದಾರೆ. ಇಷ್ಟನ್ನೂ ಮೀರಿ ಈಗ ತಮ್ಮ ದೇಹವನ್ನೇ ವೈದ್ಯಕೀಯ ಸಂಶೋಧನೆ ವಿಭಾಗಕ್ಕೆ ಅರ್ಪಿಸಲು ಮುಂದಾಗಿದ್ದಾರೆ.
"ನಾನು ದೀರ್ಘಕಾಲದ ಬೆನ್ನೆಲುಬಿನ ಸಮಸ್ಯೆಯಿಂದ ಬಳಲುತ್ತಿರುವ ಕಾರಣ ಮನುಷ್ಯರ ನೋವು ಮತ್ತು ಬಳಲುವಿಕೆ ಅರ್ಥವಾಗುತ್ತದೆ. ರೋಗ ಹರಡುವುದನ್ನು ತಡೆಯಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರೆಡೂ ಬಹಳಷ್ಟು ಶ್ರಮಿಸುತ್ತಿವೆ. ಈ ನಿಟ್ಟಿನಲ್ಲಿ ನನ್ನದೂ ಒಂದು ಕಿರು ಸಹಾಯ ಅಷ್ಟೇ. ಮಾನವನ ಮೇಲೆ ಸಂಭವನೀಯ ಔಷಧಿಗಳನ್ನು, ಲಸಿಕೆಗಳನ್ನು ಪ್ರಯೋಗಿಸಿ ಪರೀಕ್ಷಿಸಬೇಕಾದ ಸಂದರ್ಭ ಬಂದರೆ ನಾನು ನನ್ನ ದೇಹ ನೀಡಲು ಸಿದ್ಧನಿದ್ದೇನೆ." ಎಂದು ಅವರು ಹೇಳಿದ್ದಾರೆ.