ನವದೆಹಲಿ: ವಲಸೆ ಕಾರ್ಮಿಕರು ತಮ್ಮ ಸ್ವಂತ ಊರುಗಳನ್ನು ಸೇರಿಕೊಳ್ಳಲು ಭಾರತೀಯ ರೈಲ್ವೆ ಶನಿವಾರ 160ಕ್ಕೂ ಹೆಚ್ಚು ಶ್ರಮಿಕ್ ವಿಶೇಷ ರೈಲುಗಳ ಸೇವೆ ನೀಡಿದೆ. ನಿನ್ನೆ ಒಂದೇ ದಿನ 167 ಶ್ರಮಿಕ್ ವಿಶೇಷ ರೈಲುಗಳು ಓಡಾಟ ನಡೆಸಿವೆ ಎಂದು ರೈಲ್ವೆ ಸಚಿವಾಲಯ ತಿಳಿಸಿದೆ.
ವಿಶೇಷವೆಂದರೆ, ಒಂದು ಶ್ರಮಿಕ್ ವಿಶೇಷ ರೈಲು ಸರಾಸರಿ 1,200 ಪ್ರಯಾಣಿಕರನ್ನು ಕರೆದೊಯ್ಯುತ್ತದೆ. ಈ ರೈಲುಗಳ ಮೂಲಕ ಈವರೆಗೆ ಸುಮಾರು 2.39 ಲಕ್ಷ ಪ್ರಯಾಣಿಕರು ಪ್ರಯಾಣಿಸಿರುವ ನಿರೀಕ್ಷೆಯಿದೆ.
ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರು ದೇಶದ ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿ, ಊರಿಗೆ ಬಂದ ಕಾರ್ಮಿಕರ ಪಟ್ಟಿಯನ್ನು ಸಿದ್ಧಪಡಿಸಿ, ರಾಜ್ಯ ನೋಡಲ್ ಅಧಿಕಾರಿ ಮೂಲಕ ರೈಲ್ವೆ ಇಲಾಖೆಗೆ ನೀಡುವಂತೆ ಮನವಿ ಮಾಡಿದ್ದಾರೆ. ಭಾರತೀಯ ರೈಲ್ವೆ ದಿನಕ್ಕೆ ಸುಮಾರು 300 ಶ್ರಮಿಕ್ ವಿಶೇಷ ರೈಲುಗಳನ್ನು ಓಡಿಸುವ ಸಾಮರ್ಥ್ಯ ಹೊಂದಿದೆ.