ಪಾಲಕ್ಕಾಡ್ (ಕೇರಳ): ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದಿದ್ದ ಗರ್ಭಿಣಿ ಆನೆಗೆ ಕೆಲ ಕಿಡಿಗೇಡಿಗಳು ಪಟಾಕಿ ತುಂಬಿದ್ದ ಅನಾನಸ್ ನೀಡಿದ್ದರಿಂದ ಅದು ಸ್ಫೋಟಗೊಂಡು ನೀರಿನಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ಕೇರಳದ ಮಲಪ್ಪುರಂನಲ್ಲಿ ನಡೆದಿದೆ.
ಪಾಲಕ್ಕಾಡ್ ಜಿಲ್ಲೆಯ ಅರಣ್ಯಾಧಿಕಾರಿ ಮೋಹನನ್ ಕೃಷ್ಣನ್ ಎಂಬವರು ಆನೆಯ ಸಾವಿನ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿವರವಾದ ಪೋಸ್ಟ್ ಹಾಕಿದ ನಂತರ ಈ ಘಟನೆ ಬೆಳಕಿಗೆ ಬಂದಿದೆ.
15 ವರ್ಷದ ಗರ್ಭಿಣಿ ಕಾಡಾನೆಯೊಂದು ಆಹಾರ ಹುಡುಕುತ್ತ ನಾಡಿಗೆ ಬಂದಿತ್ತು. ಗ್ರಾಮದ ಬೀದಿಗಳಲ್ಲಿ ಆನೆಯನ್ನು ನೋಡಿದ ಸ್ಥಳೀಯ ಕಿಡಿಗೇಡಿಗಳು ಅನಾನಸ್ನಲ್ಲಿ ಪಟಾಕಿ ಇಟ್ಟು ಆನೆಯ ಬಾಯಿಗಿಟ್ಟಿದ್ದಾರೆ. ಆನೆ ಈ ಅನಾನಸ್ ಜಗಿದ ತಕ್ಷಣ ಅದು ಸ್ಫೋಟಗೊಂಡಿದೆ. ಸ್ಫೋಟದಿಂದಾಗಿ ಆನೆಯ ಬಾಯಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ. ನೋವು ತಾಳಲಾರದೆ ಅದು ತಕ್ಷಣವೇ ವೆಲ್ಲಿಯಾರ್ ನದಿಯಲ್ಲಿ ಹೋಗಿ ನಿಂತಿದ್ದು, ಅಲ್ಲೇ ಕೊನೆಯುಸಿರೆಳೆದಿದೆ.
ಇದಕ್ಕೆ ಸಂಬಂಧಿಸಿದಂತೆ ಮಲಪ್ಪುರಂ ಜಿಲ್ಲೆಯ ಅರಣ್ಯಾಧಿಕಾರಿ ಮೋಹನನ್ ಕೃಷ್ಣನ್ ಫೇಸ್ಬುಕ್ನಲ್ಲಿ ಪೋಸ್ಟ್ ಹಾಕಿಕೊಂಡಿದ್ದಾರೆ. '' ಅವಳು ಎಲ್ಲರನ್ನೂ ನಂಬಿದ್ದಳು. ಅನಾನಸ್ ತಿಂದಾಗ ಅದು ಬಾಯಲ್ಲೇ ಪಟಾಕಿಯಂತೆ ಸ್ಫೋಟಗೊಂಡಿತು. ಆಗ ಆಕೆಗೆ ತನ್ನ ಜೀವದ ಬಗ್ಗೆ ಆಘಾತ ಆಗಿರಲಿಕ್ಕಿಲ್ಲ. ಬದಲಾಗಿ ಇನ್ನೂ 18 ರಿಂದ 20 ತಿಂಗಳುಗಳಲ್ಲಿ ಹೊಸ ಪ್ರಪಂಚ ಕಾಣಬೇಕಿದ್ದ ಪುಟ್ಟ ಕಂದನ ಬಗ್ಗೆ ಯೋಚನೆ ಮಾಡಿರಬಹುದು'' ಎಂದು ಅರಣ್ಯಾಧಿಕಾರಿ ಮೋಹನನ್ ಕೃಷ್ಣ ತಮ್ಮ ಫೇಸ್ಬುಕ್ ಪೇಜ್ನಲ್ಲಿ ಬರೆದುಕೊಂಡಿದ್ದಾರೆ.
ಪಟಾಕಿ ಸ್ಫೋಟದ ತೀವ್ರತೆ ಎಷ್ಟಿತ್ತೆಂದರೆ, ಆನೆಯ ಬಾಯಿ ಮತ್ತು ನಾಲಗೆ ಅಕ್ಷರಶಃ ಛಿದ್ರಗೊಂಡಿತ್ತು. ಬಹಳ ಹಸಿವು ಮತ್ತು ನೋವಿನಿಂದ ಬಳಲುತ್ತಿದ್ದ ಆನೆ ಊರಲ್ಲೆಲ್ಲಾ ಓಡಾಡಿತ್ತು. ಆದರೆ, ನೋವಿನ ಕಾರಣದಿಂದ ಆನೆಗೆ ಏನನ್ನೂ ತಿನ್ನಲು ಸಾಧ್ಯವಾಗಿಲ್ಲ.
''ತಡೆಯಲು ಅಸಾಧ್ಯವಾದ ನೋವಿನಿಂದ ಆಕೆ ಒದ್ದಾಡಿ ಇಡೀ ಗ್ರಾಮದ ಬೀದಿಗಳಲ್ಲಿ ಓಡಿದರೂ ಯಾರಿಗೂ ಏನೂ ಮಾಡಿಲ್ಲ. ಒಂದೇ ಒಂದು ಮನೆಯನ್ನೂ ಹಾನಿಗೊಳಿಸಿಲ್ಲ. ಅದಕ್ಕಾಗಿಯೇ ಈಕೆ ಬಹಳ ಒಳ್ಳೆಯವಳು ಅಂತ ನಾನು ಹೇಳಿದ್ದೆ'' ಎಂದು ಕೃಷ್ಣನ್ ಬಹಳ ಭಾವನಾತ್ಮಕವಾಗಿ ತಮ್ಮ ಫೇಸ್ಬುಕ್ ಪೇಜ್ನಲ್ಲಿ ಬರೆದಿದ್ದಾರೆ.
ನದಿಯಲ್ಲಿ ನಿಂತುಕೊಂಡಿದ್ದ ಗಾಯಾಳು ಆನೆ ಹೊರತರಲು ಮತ್ತೆರಡು ಆನೆಗಳನ್ನು ಸ್ಥಳಕ್ಕೆ ಕರೆತರಲಾಗಿತ್ತು. ಆದರೆ, ಗಾಯಾಳು ಆನೆ ನೀರಿನಿಂದ ಆಚೆ ಬಂದಿಲ್ಲ. ಮೇ 27ರಂದು ಸಂಜೆ 4 ಗಂಟೆಗೆ ಗರ್ಭಿಣಿ ಆನೆ ನೀರಿನಲ್ಲಿ ನಿಂತಲ್ಲೇ ದಾರುಣವಾಗಿ ಪ್ರಾಣ ಬಿಟ್ಟಿತು ಎಂದು ತಿಳಿಸಿದ್ದಾರೆ.
ಈ ಹಿಂದೆ ಕೂಡ ಅನೇಕ ಸಲ ಆನೆ ಈ ಗ್ರಾಮದತ್ತ ಬಂದಿದ್ದು, ಜನರು ಕೊಟ್ಟ ಆಹಾರ ತಿಂದುಕೊಂಡು ಹೋಗುತ್ತಿತ್ತು. ಆದರೆ ಇದೀಗ ದುಷ್ಕರ್ಮಿಗಳು ಈ ಕೃತ್ಯವೆಸಗಿದ್ದಾರೆ.